ADVERTISEMENT

ಸರ್ಕಾರಿ ಐಟಿಐ ಉನ್ನತೀಕರಣಕ್ಕೆ ಒಪ್ಪಂದ

ರಾಜ್ಯ ಸರ್ಕಾರ– ಟಾಟಾ ಟೆಕ್ನಾಲಜೀಸ್‌ ಸಹಭಾಗಿತ್ವದ ಯೋಜನೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2020, 17:52 IST
Last Updated 6 ನವೆಂಬರ್ 2020, 17:52 IST

ಬೆಂಗಳೂರು: ₹ 4,636 ಕೋಟಿ ವೆಚ್ಚದಲ್ಲಿ ರಾಜ್ಯದ 150 ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ಉನ್ನತೀಕರಿಸುವ ಒಪ್ಪಂದಕ್ಕೆ ರಾಜ್ಯ ಸರ್ಕಾರ ಮತ್ತು ಟಾಟಾ ಟೆಕ್ನಾಲಜೀಸ್‌ ಶುಕ್ರವಾರ ಸಹಿ ಹಾಕಿವೆ. ಈ ಯೋಜನೆಗೆ ಟಾಟಾ ಟೆಕ್ನಾಲಜೀಸ್‌ ಶೇಕಡ 80ರಷ್ಟು ವೆಚ್ಚ ಭರಿಸಿದರೆ, ರಾಜ್ಯ ಸರ್ಕಾರ ಶೇ 20ರಷ್ಟು ಭರಿಸಲಿದೆ.

ಮುಖ್ಯಮಂತ್ರಿಯವರ ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಉಪ ಮುಖ್ಯ ಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಉಪಸ್ಥಿತಿಯಲ್ಲಿ ರಾಜ್ಯ ಸರ್ಕಾರದ ಜೀವನೋಪಾಯ ಮತ್ತು ಕೌಶಲಾಭಿ
ವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ.ಎಸ್‌. ಸೆಲ್ವ ಕುಮಾರ್‌ ಹಾಗೂ ಟಾಟಾ ಟೆಕ್ನಾಲಜೀಸ್‌ ಅಧ್ಯಕ್ಷ ಆನಂದ್‌ ಭಡೆ ಒಪ್ಪಂದಕ್ಕೆ ಸಹಿ ಹಾಕಿದರು.

ಬಳಿಕ ಮಾತನಾಡಿದ ಯಡಿಯೂರಪ್ಪ, ‘ರಾಜ್ಯದ ಎಲ್ಲ ಜಿಲ್ಲೆಗ ಳಲ್ಲಿ ಸರ್ಕಾರಿ ಐಟಿಐಗಳನ್ನು ಆಯ್ದು ಉನ್ನತೀಕರಿಸಲಾಗುವುದು. ಯೋಜನೆಗೆ ಟಾಟಾ ಟೆಕ್ನಾಲಜೀಸ್‌ ₹ 4,080 ಕೋಟಿ ವೆಚ್ಚ ಮಾಡಲಿದೆ. ರಾಜ್ಯ ಸರ್ಕಾರ ಐಟಿಐಗಳ ಉನ್ನತೀಕರಣಕ್ಕೆ ₹ 566 ಕೋಟಿ ಮತ್ತು ಅಲ್ಲಿನ ಮೂಲಸೌಕರ್ಯ ಅಭಿವೃದ್ಧಿಗೆ ₹ 105 ಕೋಟಿ ವೆಚ್ಚ ಮಾಡಲಿದೆ’ ಎಂದು ತಿಳಿಸಿದರು.

ADVERTISEMENT

ಕೈಗಾರಿಕಾ ಕ್ಷೇತ್ರದ ಈಗಿನ ಅಗತ್ಯಕ್ಕೆ ತಕ್ಕಂತೆ ಐಟಿಐಗಳಲ್ಲಿನ ಶಿಕ್ಷಣ ಕ್ರಮವನ್ನು ಸುಧಾರಿಸುವುದು ಯೋಜನೆಯ ಗುರಿ. ಟಾಟಾ ಟೆಕ್ನಾಲಜೀಸ್‌ ಜತೆ 20 ಕೈಗಾರಿಕಾ ಪಾಲುದಾರರು ಯೋಜನೆಯ ಸಹಭಾಗಿತ್ವ ವಹಿಸಲಿದ್ದಾರೆ. ಐಟಿಐಗಳಲ್ಲಿ ಅತ್ಯಾಧುನಿಕ ಯಂತ್ರೋಪಕರಣ, ತಂತ್ರಾಂಶ, ಹೊಸ ಪಠ್ಯಕ್ರಮ ಅಳವಡಿಸುವ ಹಾಗೂ ‘ಸ್ಮಾರ್ಟ್‌’ ಉತ್ಪಾದನಾ ವಿಧಾನಗಳನ್ನು ಪರಿಚಯಿಸುವುದು ಯೋಜನೆಯ ಭಾಗವಾಗಿದೆ ಎಂದರು.

ಅಶ್ವತ್ಥನಾರಾಯಣ ಮಾತನಾಡಿ, ‘ಈ ಕಾರ್ಯಕ್ರಮದಿಂದ ಪ್ರತಿ ವರ್ಷ ಒಂದು ಲಕ್ಷ ವಿದ್ಯಾರ್ಥಿಗಳಿಗೆ ಉತ್ತಮ ಉದ್ಯೋಗಾವಕಾಶಗಳು ಲಭಿಸಲಿವೆ. ಮುಂದಿನ ವರ್ಷದಿಂದ ಐಟಿಐಗಳಲ್ಲಿ 10 ಹೊಸ ಕೋರ್ಸ್‌ಗಳನ್ನು ಆರಂಭಿ ಸಲಾಗುವುದು. ಕೈಗಾರಿಕಾ ಕ್ಷೇತ್ರದ ಬೇಡಿಕೆಗೆ ಅನುಗುಣವಾಗಿ ಕೌಶಲಾಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಚಯಿಸಲಾಗುವುದು’ ಎಂದು ತಿಳಿಸಿದರು.

10 ವರ್ಷ ಒಂಬತ್ತು ತಿಂಗಳ ಅವಧಿಯಲ್ಲಿ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಮೊದಲ ಹಂತದಲ್ಲಿ ಪೀಣ್ಯ, ಹೊಸೂರು ರಸ್ತೆ, ಬಳ್ಳಾರಿ, ಮೈಸೂರು, ದಾಸ್ತಿಕೊಪ್ಪ ಮತ್ತು ಶಿಕಾರಿಪುರದ ಐಟಿಐಗಳನ್ನು ಉನ್ನತೀಕರಿಸಲಾಗುತ್ತದೆ.

ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌, ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ಟಾಟಾ ಟೆಕ್ನಾಲಜೀಸ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮತ್ತು ವ್ಯವಸ್ಥಾಪಕ ನಿರ್ದೇಶಕ ವಾರನ್‌ ಹ್ಯಾರಿಸ್‌, ಉದ್ಯೋಗ ಮತ್ತು ತರಬೇತಿ ಇಲಾಖೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.