ADVERTISEMENT

ಸಾವಯವ ಕೃಷಿಯಲ್ಲಿ ಉತ್ತಮ ಫಸಲು

20 ಗುಂಟೆ ಜಾಗದಲ್ಲಿ ಪಾಲಿಹೌಸ್‌ ನಿರ್ಮಾಣ; ಹೂಗಾರರ ಉತ್ತಮ ಸಾಧನೆ

ಸದಾಶಿವ ಮಿರಜಕರ
Published 10 ಜೂನ್ 2019, 19:45 IST
Last Updated 10 ಜೂನ್ 2019, 19:45 IST
ಪಾಲಿಹೌಸ್‌ನಲ್ಲಿ ಬೆಳೆದಿರುವ ಟೊಮೆಟೊ ಬೆಳೆ ಶಿವಾನಂದ ಹೂಗಾರ ವೀಕ್ಷಿಸಿದರು
ಪಾಲಿಹೌಸ್‌ನಲ್ಲಿ ಬೆಳೆದಿರುವ ಟೊಮೆಟೊ ಬೆಳೆ ಶಿವಾನಂದ ಹೂಗಾರ ವೀಕ್ಷಿಸಿದರು   

ಸವದತ್ತಿ: ಪಟ್ಟಣದ ಪ್ರಗತಿಪರ ರೈತ ಶಿವಾನಂದ ಹೂಗಾರ ಅವರು ತಮ್ಮ ಹೊಲದ 20 ಗುಂಟೆ ಜಾಗದಲ್ಲಿ ಪಾಲಿಹೌಸ್‌ ನಿರ್ಮಿಸಿದ್ದು, ಸಾವಯವ ಕೃಷಿ ಮೂಲಕ ಉತ್ತಮ ಫಸಲು ತೆಗೆಯುತ್ತಿದ್ದಾರೆ. ವರ್ಷದಲ್ಲಿ ಎರಡು ಫಸಲು ತಗೆಯುವ ಮೂಲಕ ಲಕ್ಷ, ಲಕ್ಷ ಲಾಭ ಪಡೆಯುತ್ತಿದ್ದಾರೆ.

ಈ ಬಾರಿ ಟೊಮೆಟೊ ಬೆಳೆ ಬೆಳೆದಿದ್ದಾರೆ. ಎರಡು ದಿನಕೊಮ್ಮೆ 25 ರಿಂದ 30 ಕೆ.ಜಿ ಹಿಡಿಯುವ ಸುಮಾರು 20 ರಿಂದ 25 ಟ್ರೇ ಗಳಷ್ಟು ಹಣ್ಣುಗಳನ್ನು ತೆಗೆಯಲಾಗುತ್ತಿದೆ. ಒಂದೊಂದು ಟ್ರೇಗೆ ಕನಿಷ್ಠ ₹ 1,059 ದಿಂದ ₹ 1,100 ವರೆಗೆ ಮಾರಾಟವಾಗಲಿದೆ. ಇದರಿಂದ ಪ್ರತಿ ಎರಡು ದಿನಕ್ಕೆ ₹ 15,000ದಿಂದ ₹ 16,000 ಸಾವಿರ ಹಣ ಬರುತ್ತದೆ. ಈಗಾಗಲೇ 6 ಬಾರಿ ಮಾರಾಟ ಮಾಡಲಾಗಿದೆ.

ಸದ್ಯ ಬೆಳೆದಿರುವ ಟೊಮೆಟೊ ಯಾವುದೇ ಸಮ್ಮಿಶ್ರ ಬೆಳೆಯಲ್ಲಾ. ಇದೊಂದು ಸುಧಾರಿತ ಜವಾರಿ ಬೆಳೆಯಾಗಿದ್ದು, ತಿನ್ನಲು ರುಚಿ, ಆರೋಗ್ಯಕ್ಕೂ ಒಳ್ಳೆಯದಾಗಿದೆ. ನಮ್ಮಲ್ಲಿ ಬೆಳೆದ ಬೆಳೆಗೆ ಧಾರವಾಡ ಮತ್ತು ಹುಬ್ಬಳ್ಳಿ ಮಹಾನಗರಗಳಲ್ಲಿ ಒಳ್ಳೆಯ ಬೇಡಿಕೆ ಇದೆ ಎನ್ನುತ್ತಾರೆ ಶಿವಾನಂದ.

ADVERTISEMENT

ತೋಟಗಾರಿಕೆ ಇಲಾಖೆಯ ಯೋಜನೆಯಡಿಯಲ್ಲಿ ಸುಮಾರು ₹ 16 ಲಕ್ಷದ ಕೆನರಾ ಬ್ಯಾಂಕ್‌ನ ಸಬ್ಸಿಡಿಯಲ್ಲಿ ಪಾಲಿಹೌಸ್‌ ನಿರ್ಮಿಸಲಾಗಿದೆ. ಕೃಷಿ ಇಲಾಖೆಯವರು ಕೆರೆ ನಿರ್ಮಿಸಿ ಕೊಟ್ಟಿದ್ದಾರೆ. ಇಲ್ಲಿ ಏರು ಮಡಿಗಳಲ್ಲಿ ಹನಿ ನೀರಾವರಿ ಒದಗಿಸಲಾಗಿದೆ.

ಸಾವಯವ ಕೃಷಿಗೆ ಆದ್ಯತೆ : ಇವರು ಸ್ವತಃ ಕೊಟ್ಟಿಗೆ ಗೊಬ್ಬರ ದಾಸ್ತಾನು ಮಾಡಿದ್ದಾರೆ. ತಮ್ಮ ಮನೆಯಲ್ಲಿ ಹಾಗೂ ಹೊಲಗಳಲ್ಲಿರುವ ಆಕಳು, ಎತ್ತುಗಳಿಂದ ಸಂಗ್ರಹವಾಗುವ ಶೆಗಣಿ, ಮೂತ್ರದ ಜತೆಗೆ ಬೇಡವಾದ ಕಸ, ಕಡ್ಡಿ ಮುಂತಾದವುಗಳನ್ನು ಸಂಗ್ರಹಿಸಿ ವರ್ಷಕ್ಕೊಮ್ಮೆ ಹೊಲಕ್ಕೆ ಹಾಕುತ್ತಾರೆ.

ಜೀವಾಮೃತ : ದೇಸಿ ಆಕಳ ಸೆಗಣಿ, ಗೋಮೂತ್ರ, ಬೆಲ್ಲ, ಕಡಲೆ ಹಿಟ್ಟು, ಹೊಲದ ಬದುವಿನ ಮಣ್ಣುನ್ನು ಸೇರಿಸಿ ಬ್ಯಾರಲ್‌ ನೀರಲ್ಲಿ ವಾರಗಟ್ಟಲೇ ಕಳಿಯಲು ಬಿಟ್ಟು ಅದನ್ನು ಸಸಿಗಳ ಬುಡಕ್ಕೆ ಸಿಂಪರಣೆ ಮಾಡಲಾಗುತ್ತದೆ. ಆಕಳ ಹಾಲಿನಿಂದ ತಯಾರಿಸಿದ ಮಜ್ಜಿಗೆಯನ್ನು ಕೂಡ ಸಿಂಪರಣೆ ಮಾಡಲಾಗುತ್ತದೆ. ಇದರಿಂದ ಫಸಲು ಚೆನ್ನಾಗಿ ಬರುತ್ತದೆ ಎನ್ನುತ್ತಾರೆ ಶಿವಾನಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.