ADVERTISEMENT

ಪ್ರತ್ಯೇಕ ಬೆಳೆ ವಿಮೆಗೆ ಚಿಂತನೆ

ಚಿತ್ರದುರ್ಗದಲ್ಲಿ ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 20:15 IST
Last Updated 16 ಅಕ್ಟೋಬರ್ 2018, 20:15 IST
ಎನ್‌.ಎಚ್‌. ಶಿವಶಂಕರ ರೆಡ್ಡಿ
ಎನ್‌.ಎಚ್‌. ಶಿವಶಂಕರ ರೆಡ್ಡಿ   

ಚಿತ್ರದುರ್ಗ: ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ಉಂಟಾಗುತ್ತಿರುವ ವಿಳಂಬವನ್ನು ತಪ್ಪಿಸಲು ರಾಜ್ಯ ಸರ್ಕಾರ ನೂತನ ಬೆಳೆ ವಿಮೆ ಯೋಜನೆ ಜಾರಿಗೆ ತರಲು ಆಲೋಚಿಸುತ್ತಿದೆ ಎಂದು ಕೃಷಿ ಸಚಿವ ಎನ್‌.ಎಚ್‌. ಶಿವಶಂಕರ ರೆಡ್ಡಿ ತಿಳಿಸಿದರು.

ಶರಣ ಸಂಸ್ಕೃತಿ ಉತ್ಸವದ ಕೃಷಿ ಮೇಳಕ್ಕೆ ಮಂಗಳವಾರ ಚಾಲನೆ ನೀಡಿದ ಅವರು, ‘ಬೆಳೆ ನಷ್ಟವಾದ ವರ್ಷವೇ ರೈತರಿಗೆ ವಿಮೆ ಸಿಗುವಂತಾಗಬೇಕು. ಇದಕ್ಕೆ ರಾಜ್ಯ ಸರ್ಕಾರ ಪ್ರತ್ಯೇಕ ಯೋಜನೆ ರೂಪಿಸಲಿದೆ’ ಎಂದರು.

‘ಕೇಂದ್ರ ಸರ್ಕಾರದ ಬೆಳೆ ವಿಮೆ ಯೋಜನೆಯನ್ನು ಸಕಾರಾತ್ಮಕವಾಗಿ ಅನುಷ್ಠಾನಗೊಳಿಸಲು ಕೆಲವು ತಾಂತ್ರಿಕ ತೊಡಕುಗಳು ಎದುರಾಗಿವೆ. ಇವುಗಳನ್ನು ನಿವಾರಿಸುವಂತೆ ಕೇಂದ್ರಕ್ಕೂ ಪ್ರಸ್ತಾವ ಸಲ್ಲಿಸಲಾಗಿದೆ. ಪ್ರಸ್ತುತ ಇರುವ ವಿಮೆಗೆ ನಿಗದಿಪಡಿಸಿದ ಮಾನದಂಡಗಳಿಗೆ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ’ ಎಂದರು.

ADVERTISEMENT

‘ಹಾಗಾಗಿ ರೈತರಿಗೆ ಹೆಚ್ಚಿನ ಅನೂಕೂಲ ಹಾಗೂ ಸರಳವಾಗಿವಿಮೆ ಮಾಡಿಸಿದ ವರ್ಷವೇ ಹಣ ಸಿಗುವಂತೆ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ’ ಎಂದರು

‘ನೀರಿನ ಮಿತ ಬಳಕೆಗೆ ಒತ್ತು ನೀಡಲಿರುವ ಸರ್ಕಾರ, ಮುಂಬರುವ ನೀರಾವರಿ ಯೋಜನೆಯಲ್ಲಿ ಹನಿ ಹಾಗೂ ತುಂತುರು ನೀರಾವರಿ ಪದ್ಧತಿಯನ್ನು ಕಡ್ಡಾಯಗೊಳಿಸಲಿದೆ. ಜಮೀನಿಗೆ ನೀರು ಹಾಯಿಸುವ ಪದ್ಧತಿಯನ್ನು ರದ್ದು ಮಾಡುವ ನಿಟ್ಟಿನಲ್ಲಿ ಚರ್ಚೆಗಳು ನಡೆಯುತ್ತಿವೆ’ ಎಂದು ಹೇಳಿದರು.

**

‘ಎತ್ತಿನ ಹೊಳೆ ನೀರು ಕೊಡಿ’

ಎತ್ತಿನ ಹೊಳೆ ಯೋಜನೆಯಿಂದ ಚಿತ್ರದುರ್ಗ ಜಿಲ್ಲೆಗೆ ಕನಿಷ್ಠ 5 ಟಿಎಂಸಿ ಅಡಿ ನೀರು ಕೊಡಬೇಕು ಎಂದು ಮುರುಘಾ ಶರಣರು ಮನವಿ ಮಾಡಿದರು.

‘ಭದ್ರಾ ಮೇಲ್ದಂಡೆ ಯೋಜನೆಯಿಂದ 2 ಟಿಎಂಸಿ ಅಡಿ ನೀರು ವಿ.ವಿ. ಸಾಗರಕ್ಕೆ ಹರಿದು ಬರಲಿದೆ. ಕುಡಿಯುವ ಹಾಗೂ ಕೃಷಿ ಚಟುವಟಿಕೆಗೆ ಇದು ಸಾಕಾಗುವುದಿಲ್ಲ. ಹೀಗಾಗಿ, ಎತ್ತಿನ ಹೊಳೆ ಯೋಜನೆಯಿಂದ ನೀರು ಹರಿಸಬೇಕು’ ಎಂಬ ಬೇಡಿಕೆಯನ್ನು ಮುಂದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.