ADVERTISEMENT

ಸಮೀಕ್ಷೆ: ಪದವಿ ಪರೀಕ್ಷೆಗೆ ವಿರೋಧ

ಎಐಡಿಎಸ್‌ಒ ಮತ ಸಂಗ್ರಹ: ಪದವಿ, ಪಿಜಿ, ಎಂಜಿನಿಯರಿಂಗ್ ವಿದ್ಯಾರ್ಥಿಗಳ ಅಭಿಮತ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 20:48 IST
Last Updated 21 ಜೂನ್ 2021, 20:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್‌ ಹಾಗೂ ಡಿಪ್ಲೊಮಾದ ಬೆಸ ಸಂಖ್ಯೆಯ ಸೆಮಿಸ್ಟರ್‌ಗೆ ಆನ್‌ಲೈನ್‌ ಅಥವಾ ಆಫ್‌ಲೈನ್‌ ಸೇರಿದಂತೆ ಯಾವುದೇ ಮಾದರಿಯಲ್ಲಿಯೂ ಪರೀಕ್ಷೆ ನಡೆಸಬಾರದು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌ (ಎಐಡಿಎಸ್‌ಒ) ಆನ್‌ಲೈನ್‌ನಲ್ಲಿ ನಡೆಸಿದ ರಾಜ್ಯಮಟ್ಟದ ಸಮೀಕ್ಷೆಯ ವಿವರವನ್ನು ಸೋಮವಾರ ಬಿಡುಗಡೆ ಮಾಡಿತು.

ಸಮೀಕ್ಷೆಯಲ್ಲಿ ಪಾಲ್ಗೊಂಡ 38 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳ ಪೈಕಿ, ಶೇ 91ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ನಡೆಸಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಉಳಿದ ಶೇ 9ರಷ್ಟು ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಬೇಕು ಎಂದು ಹೇಳಿದ್ದಾರೆ ಎಂದು ಸಂಘಟನೆಯ ರಾಜ್ಯ ಕಾರ್ಯಕಾರಿ ಸದಸ್ಯ ಸುಭಾಷ್‌ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ADVERTISEMENT

ಈ ತರಗತಿಗಳ ಬೆಸ ಸಂಖ್ಯೆಯ (1,3,5) ಸೆಮಿಸ್ಟರ್‌ಗಳ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ, ಅವರು ಹಿಂದಿನ ಸೆಮಿಸ್ಟರ್‌ಗಳಲ್ಲಿ ತೆಗೆದ ಅಂಕಗಳು ಮತ್ತು ಆಂತರಿಕ ಪರೀಕ್ಷೆಯಲ್ಲಿನ ಅಂಕಗಳನ್ನು ಪರಿಗಣಿಸಿ, ಗ್ರೇಡ್‌ ನೀಡಿ ಮುಂದಿನ ಸೆಮಿಸ್ಟರ್‌ಗಳಿಗೆ ಉತ್ತೀರ್ಣಗೊಳಿಸಬೇಕು ಎಂಬ ಅಭಿಪ್ರಾಯ ಸಮೀಕ್ಷೆಯಲ್ಲಿ ವ್ಯಕ್ತವಾಗಿದೆ ಎಂದರು.

1,3 ಮತ್ತು 5ನೇ ಸೆಮಿಸ್ಟರ್‌ಗಳಿಗೆ ಈಗಾಗಲೇ ಪರೀಕ್ಷೆ ನಡೆಸಬೇಕಿತ್ತು. ಲಾಕ್‌ಡೌನ್‌ನಿಂದ ಅದು ಸಾಧ್ಯವಾಗಿಲ್ಲ. ಆದರೆ, ಈಗಾಗಲೇ 2,4 ಮತ್ತು 6ನೇ ಸೆಮಿಸ್ಟರ್‌ಗಳ ಆನ್‌ಲೈನ್‌ ತರಗತಿ ಪ್ರಾರಂಭ ಮಾಡಲಾಗಿದೆ. ಈ ವಿದ್ಯಾರ್ಥಿಗಳಿಗೆ ಆಂತರಿಕ ಮೌಲ್ಯಮಾಪನವನ್ನೂ ಪ್ರಾರಂಭಿಸಿದ್ದಾರೆ. ಹಿಂದಿನ ಸೆಮಿಸ್ಟರ್‌ ಪರೀಕ್ಷೆಯನ್ನು (ಬೆಸ) ಜುಲೈನಲ್ಲಿ ಬರೆಯರಿ, ಈಗಿನ ಸೆಮಿಸ್ಟರ್‌ನ (ಸಮ) ಪರೀಕ್ಷೆಯನ್ನು ಸೆಪ್ಟೆಂಬರ್‌ನಲ್ಲಿ ಬರೆಯಿರಿ ಎಂದು ಉನ್ನತ ಶಿಕ್ಷಣ ಇಲಾಖೆ ಹೇಳಿದೆ. ಒಂದೇ ತಿಂಗಳ ಅಂತರದಲ್ಲಿ 12ರಿಂದ 14 ವಿಷಯಗಳ ತಯಾರಿ ನಡೆಸಲು, ಪರೀಕ್ಷೆ ಬರೆಯಲು ಸಾಧ್ಯವೇ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಸಂಬಂಧಪಟ್ಟವರ ಜೊತೆಗೆ ಚರ್ಚಿಸದೆ ಏಕಪಕ್ಷೀಯವಾಗಿ ಇಂತಹ ಅತಾರ್ಕಿಕ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿ, ಇದೇ 23ರಂದು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಲಾಗುವುದು’ ಎಂದು ಅವರು ಹೇಳಿದರು.

ಸಂಘಟನೆಯ ಖಜಾಂಚಿ ಅಭಯ, ಉಪಾಧ್ಯಕ್ಷ ಹನುಮಂತ ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.