ADVERTISEMENT

ಪರೀಕ್ಷೆಗಳಿಗಿಂತಲೂ ಜೀವನವೇ ಮುಖ್ಯ: ಬೆಂಗಳೂರು ವಿವಿ ವಿಶ್ರಾಂತ ಉಪಕುಲಪತಿ

​ಪ್ರಜಾವಾಣಿ ವಾರ್ತೆ
Published 29 ಜೂನ್ 2021, 21:56 IST
Last Updated 29 ಜೂನ್ 2021, 21:56 IST

ಬೆಂಗಳೂರು: ‘ಕೋವಿಡ್‌ ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರವು ಪದವಿ, ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ನಡೆಸಲು ಮುಂದಾಗಿರುವುದು ಸರಿಯಲ್ಲ. ಇದು ವಿದ್ಯಾರ್ಥಿ ವಿರೋಧಿ ನಿರ್ಣಯ. ಇಂತಹ ದುಸ್ಸಾಹಸವು ವಿದ್ಯಾರ್ಥಿಗಳ ಜೀವಕ್ಕೆ ಸಂಚಕಾರ ತಂದೊಡ್ಡಬಲ್ಲದು’ ಎಂದು ವೈದ್ಯ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಉಪಕುಲಪತಿ ಡಾ.ಪ್ರಭುದೇವ ಅಭಿಪ್ರಾಯಪಟ್ಟರು.

ಅಖಿಲ ಭಾರತ ಡೆಮಾಕ್ರಟಿಕ್‌ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ) ಆನ್‌ಲೈನ್‌ನಲ್ಲಿ ಹಮ್ಮಿಕೊಂಡಿದ್ದ ‘ವಿದ್ಯಾರ್ಥಿಗಳಿಗೆ ಒಂದು ತಿಂಗಳಲ್ಲಿ ಎರಡು ಸೆಮಿಸ್ಟರ್‌ ಪರೀಕ್ಷೆ–ಎಷ್ಟು ವೈಜ್ಞಾನಿಕ?’ ವಿಷಯದ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

‘ಕೋವಿಡ್‌ ಎರಡನೇ ಅಲೆಯಲ್ಲಿ ಸಾಕಷ್ಟು ಮಂದಿ ಸಾವಿಗೀಡಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸಿದರೆ ಮೂರನೇ ಅಲೆಗೆ ನಾವೇ ಆಮಂತ್ರಣ ನೀಡಿದಂತಾಗುತ್ತದೆ. ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಮುಂದಾಗಿದ್ದ ಆಂಧ್ರಪ್ರದೇಶ ಸರ್ಕಾರವು ಸುಪ್ರೀಂಕೋರ್ಟ್‌ ತಪರಾಕಿ ಹಾಕಿದ ಬಳಿಕ ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು. ಕರ್ನಾಟಕ ಸರ್ಕಾರ ಕೂಡ ದ್ವಿತೀಯ ಪಿಯುಸಿ ಪರೀಕ್ಷೆ ರದ್ದುಗೊಳಿಸಿದೆ. ಇದನ್ನು ರಾಜ್ಯ ಸರ್ಕಾರ ಗಮನದಲ್ಲಿಟ್ಟುಕೊಳ್ಳಬೇಕು. ಸೆಮಿಸ್ಟರ್‌ ಪರೀಕ್ಷೆಗಳನ್ನೂ ರದ್ದು ಮಾಡುವುದು ಒಳಿತು’ ಎಂದರು.

ADVERTISEMENT

‘ಈಗಿನ ಪರಿಸ್ಥಿತಿಯಲ್ಲಿ ಜನರ ಜೀವ ಉಳಿಸುವುದೇ ನಮಗೆ ಮುಖ್ಯವಾಗಬೇಕು. ಪರೀಕ್ಷೆ ನಡೆಸುವುದು ಮೂರ್ಖತನದ ನಿರ್ಧಾರವಾದಿತು. ಬಹುತೇಕ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿಗಳಿಗೆ ಹಾಜರಾಗಲು ಆಗಿಲ್ಲ. ಅಂತಹವರು ಪರೀಕ್ಷೆ ಬರೆಯುವುದಾದರೂ ಹೇಗೆ’ ಎಂದು ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ವಿಶ್ರಾಂತ ಉಪಕುಲಪತಿಗಳ ವೇದಿಕೆಯ ಕಾರ್ಯದರ್ಶಿ ಆರ್.ಎನ್‌.ಶ್ರೀನಿವಾಸಗೌಡ ಪ್ರಶ್ನಿಸಿದರು.

‘ವಿದ್ಯಾರ್ಥಿಗಳು ನೆನಪಿಡುವ ಯಂತ್ರಗಳಲ್ಲ. ಅವರ ಮೇಲೆ ಪರೀಕ್ಷೆಯ ಒತ್ತಡ ಹೇರುವುದು ಸರಿಯಲ್ಲ. ಶೈಕ್ಷಣಿಕ ವಿಚಾರಗಳ ಬಗ್ಗೆ ನಿರ್ಧರಿಸುವಾಗ ಸರ್ಕಾರವು ಪ್ರಜಾತಾಂತ್ರಿಕವಾಗಿ ಇರಬೇಕು. ಶಿಕ್ಷಣ ಹಾಗೂ ಮಾನಸಿಕ ತಜ್ಞರ ಅಭಿಪ್ರಾಯವನ್ನು ಆಲಿಸಬೇಕು’ ಎಂದು ಸಾಹಿತಿ ಅಲ್ಲಮಪ್ರಭು ಬೆಟ್ಟದೂರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.