ADVERTISEMENT

ರಾಯಚೂರಿಗೆ ಏಮ್ಸ್: ಸಂಸದ ಆಗ್ರಹ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2023, 16:15 IST
Last Updated 5 ಡಿಸೆಂಬರ್ 2023, 16:15 IST
ರಾಜಾ ಅಮರೇಶ್ವರ ನಾಯಕ
ರಾಜಾ ಅಮರೇಶ್ವರ ನಾಯಕ   

ನವದೆಹಲಿ: ರಾಯಚೂರಿನಲ್ಲಿ ಏಮ್ಸ್‌ ಸ್ಥಾಪಿಸಬೇಕು ಎಂದು ಬಿಜೆಪಿಯ ಸಂಸದ ರಾಜಾ ಅಮರೇಶ್ವರ ನಾಯಕ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು. 

ಲೋಕಸಭೆಯಲ್ಲಿ ನಿಯಮ 377ರಡಿ ಮಂಗಳವಾರ ವಿಷಯ ಪ್ರಸ್ತಾಪಿಸಿದ ಅವರು, ‘ರಾಯಚೂರಿನಲ್ಲಿ ಏಮ್ಸ್ ಸ್ಥಾಪಿಸಿದರೆ ಮೂಲಸೌಕರ್ಯ ಒದಗಿಸುವುದಾಗಿ ಕರ್ನಾಟಕ ಸರ್ಕಾರ ಭರವಸೆ ನೀಡಿದೆ’ ಎಂದು ತಿಳಿಸಿದರು. 

‘ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳು ಅತೀ ಹಿಂದುಳಿದ ಜಿಲ್ಲೆಗಳಾಗಿವೆ. ಈ ಜಿಲ್ಲೆಗಳಲ್ಲಿ ಶೇ 70ರಷ್ಟು ಒಬಿಸಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಇದ್ದಾರೆ. ಸಾಕ್ಷರತೆ ಪ್ರಮಾಣ ಶೇ 59ರಷ್ಟಿದೆ. ರಾಯಚೂರು ಕ್ಷೇತ್ರದಲ್ಲಿರುವ ಒಬಿಸಿ/ಎಸ್ಸಿ/ಎಸ್‌ಟಿ ಜನರು ಆರ್ಥಿಕವಾಗಿ ಹಿಂದುಳಿದವರು. ಹೀಗಾಗಿ, ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ವೈದ್ಯಕೀಯ ವ್ಯವಸ್ಥೆ ಲಭ್ಯವಾಗುತ್ತಿಲ್ಲ. ಏಮ್ಸ್ ಸ್ಥಾಪಿಸಿದರೆ ಜೀವನಮಟ್ಟ ಸುಧಾರಣೆ ಆಗಲಿದೆ. ಜತೆಗೆ ಉದ್ಯೋಗ ಸೃಷ್ಟಿಯಾಗಲಿದೆ’ ಎಂದು ಅವರು ಗಮನ ಸೆಳೆದರು. 

ADVERTISEMENT

ಕಲಬುರಗಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ರಾಯಚೂರಿನಲ್ಲಿ ಐಐಟಿ ಸ್ಥಾಪನೆ ಮಾಡಲು ನಂಜುಂಡಪ್ಪ ಸಮಿತಿ ಶಿಫಾರಸು ಮಾಡಿತ್ತು. 2011ರಲ್ಲಿ ಕಲಬುರಗಿಯಲ್ಲಿ ಕೇಂದ್ರೀಯ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ. ಆದರೆ, ಐಐಟಿ ಧಾರವಾಡದಲ್ಲಿ ಸ್ಥಾಪನೆಗೊಂಡಿದೆ. ರಾಯಚೂರು ಜಿಲ್ಲೆಯ ಜನರು ಚಿಕಿತ್ಸೆ ಪಡೆಯಲು ಬೆಂಗಳೂರು, ಪುಣೆ ಅಥವಾ ಹೈದರಾಬಾದ್‌ಗೆ ಹೋಗಬೇಕಿದೆ. ಇಲ್ಲಿನ ಜನರು ತಮ್ಮ ಆದಾಯದ ಶೇ 70ರಷ್ಟನ್ನು ಚಿಕಿತ್ಸೆಗಾಗಿ ವ್ಯಯ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.