ADVERTISEMENT

2ನೇ ವಿಮಾನ ನಿಲ್ದಾಣ: 15 ದಿನಗಳಲ್ಲಿ ಸ್ಪಷ್ಟ ಚಿತ್ರಣ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 19:32 IST
Last Updated 13 ಜೂನ್ 2025, 19:32 IST
<div class="paragraphs"><p>ವಿಮಾನ ನಿಲ್ದಾಣ</p></div>

ವಿಮಾನ ನಿಲ್ದಾಣ

   

–ಪಿಟಿಐ ಚಿತ್ರ

ಬೆಂಗಳೂರು: ನಗರದ ಸಮೀಪ ನಿರ್ಮಿಸಲು ಉದ್ದೇಶಿಸಿರುವ ಎರಡನೇ ವಿಮಾನ ನಿಲ್ದಾಣಕ್ಕಾಗಿ ಮೂರು ಸ್ಥಳಗಳನ್ನು ಪರಿಶೀಲಿಸಿರುವ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ (ಎಎಐ) 15 ದಿನಗಳಲ್ಲಿ ಅಭಿಪ್ರಾಯ ತಿಳಿಸಲಿದ್ದು, ಸ್ಥಳವನ್ನು ಅಂತಿಮಗೊಳಿಸಲಾಗುವುದು ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ADVERTISEMENT

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ‘ಎಎಐ ತಂಡ ಅಭಿಪ್ರಾಯ ನೀಡಿದ ತಕ್ಷಣ ವಿಸ್ತೃತ ಅಧ್ಯಯನಕ್ಕೆ ವಿಮಾನ‌ ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವಂಥ ಪರಿಣತ ಕಂಪನಿಗಳ ಜತೆ ಚರ್ಚಿಸಲಾಗುವುದು. ಪ್ರಯಾಣಿಕರ ಅನುಕೂಲ, ಕಾರ್ಗೋ ದಟ್ಟಣೆ ಮತ್ತು ಕೈಗಾರಿಕೆಗಳ ಅಗತ್ಯ ಮತ್ತಿತರ ಅಂಶಗಳನ್ನು ಪರಿಗಣಿಸಿ ವಿಮಾನ‌ ನಿಲ್ದಾಣಕ್ಕೆ ಸ್ಥಳವನ್ನು ಅಂತಿಮಗೊಳಿಸಲಾಗುವುದು ಎಂದರು.

‘ಉದ್ಯಮಿಗಳಿಗೆ, ಪ್ರವಾಸಿಗರಿಗೆ, ಸಾರ್ವಜನಿಕರಿಗೆ ಅನುಕೂಲವಾಗುವಂತಹ ಸ್ಥಳದಲ್ಲೇ ವಿಮಾನ ನಿಲ್ದಾಣ ನಿರ್ಮಿಸಬೇಕು. ವಿಮಾನ ನಿಲ್ದಾಣ ನಿರ್ಮಾಣಕ್ಕೆ ಹೂಡಿಕೆ ಮಾಡುವ ಕಂಪನಿಗೂ ಅನುಕೂಲವಾಗಬೇಕು. ಹೀಗಾಗಿ, ಬೆಂಗಳೂರಿಂದ 50 ಕಿ.ಮೀಗೂ ಹೆಚ್ಚು ದೂರ ಇರಬಾರದು ಎಂಬುದು ಸರ್ಕಾರದ ನಿಲುವು’ ಎಂದು ಹೇಳಿದರು.

ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್‌ ಹಾಗೂ ಕೇಂದ್ರ ಸರ್ಕಾರ ಮಾಡಿಕೊಂಡ ಒಪ್ಪಂದದ ಪ್ರಕಾರ, ಕೆಂಪೇಗೌಡ ವಿಮಾನ ನಿಲ್ದಾಣದ 150 ಕಿ.ಮೀ. ವ್ಯಾಪ್ತಿಯಲ್ಲಿ 2033ರವರೆಗೆ ಯಾವುದೇ ಹೊಸ ವಿಮಾನನಿಲ್ದಾಣ ನಿರ್ಮಿಸುವಂತಿಲ್ಲ. ಆದರೆ, ಭೂಸ್ವಾಧೀನ ಪ್ರಕ್ರಿಯೆ, ಅನುಮತಿ, ವಿಮಾನ ನಿಲ್ದಾಣ ಕಾಮಗಾರಿಗೆ ಸಾಕಷ್ಟು ಸಮಯ ಬೇಕಾಗುತ್ತದೆ. ಈಗಲೇ ಪ್ರಕ್ರಿಯೆ ಆರಂಭಿಸಿದರೆ 2033ರ ವೇಳೆಗೆ ವಿಮಾನ ನಿಲ್ದಾಣದ ಕಾರ್ಯಾಚರಣೆ ಆರಂಭಿಸಬಹುದು ಎನ್ನುವ ಅಂಶಗಳ ಆಧಾರದಲ್ಲಿ ರಾಜ್ಯ ಸರ್ಕಾರ ಮತ್ತೊಂದು ನಿಲ್ದಾಣದ ಸ್ಥಳ ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಿತ್ತು. 

ಆರಂಭದಲ್ಲಿ ಏಳು ಸ್ಥಳಗಳಲ್ಲಿ ಪ್ರಾಥಮಿಕ ಪರಿಶೀಲನಾ ಕಾರ್ಯ ನಡೆಸಿತ್ತು. ಮೂಲಗಳ ಪ್ರಕಾರ ಅಂತಿಮವಾಗಿ ನೆಲಮಂಗಲದ ಬಳಿ ಒಂದು, ಕನಕಪುರ ರಸ್ತೆಯ ಬಳಿ ಎರಡು ಸ್ಥಳ ಗುರುತಿಸಲಾಗಿದ್ದು, ಒಂದು ಸ್ಥಳ ಅಂತಿಮವಾಗಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.