ADVERTISEMENT

ಸಾಹಿತ್ಯದಲ್ಲಿ ಭಾರತೀಯತೆ ಮಾಯ: ಸಮ್ಮೇಳನಾಧ್ಯಕ್ಷ ಪ್ರೊ.ಪ್ರೇಮಶೇಖರ ಕಳವಳ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2018, 19:32 IST
Last Updated 29 ಡಿಸೆಂಬರ್ 2018, 19:32 IST
ಸಮ್ಮೇಳನಾಧ್ಯಕ್ಷ ಪ್ರೊ.ಪ್ರೇಮಶೇಖರ (ಎಡ) ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಪರಿಷದ್‌ ಅಧ್ಯಕ್ಷ ಡಾ.ದೊಡ್ಡರಂಗೇಗೌಡ ಇದ್ದಾರೆ
ಸಮ್ಮೇಳನಾಧ್ಯಕ್ಷ ಪ್ರೊ.ಪ್ರೇಮಶೇಖರ (ಎಡ) ಅವರನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಪರಿಷದ್‌ ಅಧ್ಯಕ್ಷ ಡಾ.ದೊಡ್ಡರಂಗೇಗೌಡ ಇದ್ದಾರೆ   

ಮೈಸೂರು: ತಿರುಚಿದ ಇತಿಹಾಸ ಓದುತ್ತಾ, ಕಾಂಗ್ರೆಸ್‌– ಕಮ್ಯೂನಿಸ್ಟ್‌ ಸಮಾಜ ವಿಜ್ಞಾನಿಗಳ ಗರಡಿಯಲ್ಲಿ ತಯಾರಾದ ಸಾಹಿತಿಗಳು ರಚಿಸಿರುವ ಸಾಹಿತ್ಯದಲ್ಲಿ ಭಾರತೀಯತೆ ಹೇಗೆ ಉಳಿಯಲು ಸಾಧ್ಯ ಎಂದು ಅಂಕಣಕಾರ, ಸಾಹಿತಿ ಪ್ರೊ.ಪ್ರೇಮಶೇಖರ ಶನಿವಾರ ಪ್ರಶ್ನಿಸಿದರು.

ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ವತಿಯಿಂದ ಮೈಸೂರಿನಲ್ಲಿ ಆಯೋಜಿಸಿರುವ ಎರಡನೇ ರಾಜ್ಯ ಸಮ್ಮೇಳನದ ಸರ್ವಾಧ್ಯಕ್ಷ ಸ್ಥಾನದಿಂದ ಮಾತನಾಡಿದರು.

‘ಭಾರತೀಯ ಸಾಹಿತ್ಯದ ಮುಂಚೂಣಿ ವರ್ಗದಲ್ಲಿರುವವರ ಬಣ್ಣಗಳು ಹಲವು. ಜೀವನದುದ್ದಕ್ಕೂ ಹಿಂದೂ ಸಂಪ್ರದಾಯಗಳ ವಿರುದ್ಧ ಬರೆದು ಸನ್ಮಾನ, ಪ್ರಶಸ್ತಿಗಳನ್ನು ಪಡೆದು ಮನೆಯೊಳಗೆ ಸಂಪ್ರದಾಯಸ್ಥ ಹಿಂದೂ ಆಗಿಯೇ ಬಾಳಿ, ಅಳಿದುಹೋದ ಹಲವು ಸಾಹಿತಿಗಳನ್ನು ಕಂಡಿದ್ದೇವೆ’ ಎಂದು ಹೇಳಿದರು.

ADVERTISEMENT

ಹಿಂದೂ ಧರ್ಮದ ವಿರುದ್ಧ ಸದ್ದುಮಾಡಿಕೊಂಡು ಓಡಾಡುವ, ಇತರ ಧರ್ಮಗಳ ವಿರುದ್ಧ ಚಕಾರವೆತ್ತದ ಅಂಜುಕುಳಿ ಸಾಹಿತಿಗಳನ್ನು ಈಗಲೂ ನೋಡುತ್ತಿದ್ದೇವೆ. ಅವರಲ್ಲಿ ಜಾಣ್ಮೆ, ಪದಸಂಪತ್ತು ವಾಕ್ಚಾತುರ್ಯವಿದೆ. ಇವೆಲ್ಲವುಗಳ ಜತೆ ಸ್ವಲ್ಪ ಮಾನ ಮರ್ಯಾದೆ ಇದ್ದಿದ್ದರೆ, ಭೂಮಿಯ ಮೇಲಿನ ಇವರ ಅಸ್ತಿತ್ವ ಅರ್ಥಪಡೆದುಕೊಳ್ಳುತ್ತಿತ್ತು ಎಂದು ವ್ಯಂಗ್ಯವಾಡಿದರು.

ಭಾರತೀಯ ಸಾಹಿತ್ಯದ ಅರ್ಥವನ್ನು ಅರಿಯದ, ಅರಿತರೂ ತೋರಿಸಿಕೊಳ್ಳದ ಅಲ್ಪಸಂಖ್ಯಾತ ವರ್ಗವೊಂದು ಪ್ರಭುತ್ವದ ಜತೆ ಸೇರಿಕೊಂಡು ಸ್ವತಂತ್ರ ಭಾರತದ ಸಾಂಸ್ಕೃತಿಕ ಮತ್ತು ವೈಚಾರಿಕ ಕ್ಷೇತ್ರಗಳ ನಾಯಕತ್ವವನ್ನು ಆಕ್ರಮಿಸಿಕೊಂಡಿದೆ. ಆ ವರ್ಗ ರೂಪಿಸಿದ ಮುಖವೇ ಭಾರತದ ಮುಖವಾಗಿ ಜಗತ್ತಿನ ಎದುರು ಪರಿಚಯಗೊಂಡಿದ್ದು ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.

ದಿಕ್ಸೂಚಿ ಭಾಷಣ ಮಾಡಿದ ಪರಿಷದ್‌ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಋಷಿಕುಮಾರ್‌ ಮಿಶ್ರಾ, ‘ಸಾಹಿತ್ಯದಲ್ಲಿ ಶೌರ್ಯ ಭಾವನೆ ಬೇಕು. ನಾವು ಸುರಕ್ಷಿತವಾಗಿರಬೇಕು, ಜತೆಗೆ ಸುತ್ತಮುತ್ತಲಿನವರು, ಪರಿಸರವನ್ನೂ ಸುರಕ್ಷಿತವಾಗಿಡಬೇಕು. ಆ ಕೆಲಸ ಸಾಹಿತ್ಯದಿಂದ ನಡೆಯಬೇಕು. ಸರ್ವರನ್ನೂ ಒಳಗೊಂಡ ಸಾಹಿತ್ಯ ನಮ್ಮದಾಗಬೇಕು’ ಎಂದರು.

ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್‌ ಸಮ್ಮೇಳನ ಉದ್ಘಾಟಿಸಿದರು. ಸಮ್ಮೇಳನಾಧ್ಯಕ್ಷರ ವೈಭವದ ಮೆರವಣಿಗೆ ನಡೆಯಿತು. ‘ಕರ್ನಾಟಕದ ಭಾಷೆಗಳ ಸಾಹಿತ್ಯದಲ್ಲಿ ಭಾರತೀಯತೆ’ ಮತ್ತು ‘ಸಂಸ್ಕೃತ ಸಾಹಿತ್ಯದಲ್ಲಿ ಭಾರತೀಯತೆ’ ವಿಷಯದಲ್ಲಿ ಗೋಷ್ಠಿಗಳು ನಡೆದವು.

ಇತಿಹಾಸ ತಿರುಚಲಾಗಿದೆ

ಈ ದೇಶದ ಇತಿಹಾಸವನ್ನು ತಿರುಚಲಾಗಿದೆ. ಕಾಂಗ್ರೆಸ್‌– ಕಮ್ಯೂನಿಸ್ಟ್‌ ಇತಿಹಾಸಗಾರರು ಇಡೀ ದೇಶಕ್ಕೆ ಸುಳ್ಳು ಹೇಳಿ ತಮ್ಮ ಅಂತಃಸಾಕ್ಷಿಯನ್ನೇ ಮಾರಿಕೊಂಡಿದ್ದಾರೆ. ಸ್ವಾತಂತ್ರ್ಯ ಲಭಿಸಿದ ಬಳಿಕ ಭಾರತದ ಇತಿಹಾಸವನ್ನು ಪುನರ್‌ರಚಿಸುವ ಅವಕಾಶವಿತ್ತು. ಆದರೆ ಬ್ರಿಟಿಷ್‌ ಶಿಕ್ಷಣ ವ್ಯವಸ್ಥೆಯ ಮೂಸೆಯಲ್ಲಿ ತಯಾರಾಗಿದ್ದ ಜವಾಹರಲಾಲ್ ನೆಹರೂ ಅವರ ಕೈಗೆ ಅಧಿಕಾರ ದೊರೆತ ಕಾರಣ ಆ ಕೆಲಸ ಆಗಲಿಲ್ಲ ಎಂದು ಪ್ರೇಮಶೇಖರ ಹೇಳಿದರು.

ಬ್ರಿಟಿಷರು ನಮ್ಮಲ್ಲಿ ಮೂಡಿಸಿದ್ದ ಕೀಳರಿಮೆಯ ಭಾವನೆಯ ಜತೆಗೆ ಮಾರ್ಕ್ಸ್‌ವಾದ ಕೂಡ ಸೇರಿಕೊಂಡು ಸೃಷ್ಟಿಸಿದ್ದ ಬೌದ್ಧಿಕ ವಿಷ ಅತ್ಯಂತ ಘಾತಕವಾಗಿತ್ತು ಎಂದು ತಿಳಿಸಿದರು.

* ಭಾರತೀಯ ಸಾಹಿತ್ಯದಲ್ಲಿ ಭಾರತೀಯತೆ, ಭಾರತೀಯ ಸಂಸ್ಕೃತಿ ಮಾಯವಾಗಿರುವುದು ದುರದೃಷ್ಟಕರ
–ಪ್ರೊ.ಪ್ರೇಮಶೇಖರ,ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.