ADVERTISEMENT

ಸ್ಮಾರಕಗಳೆಲ್ಲ ವಿಶ್ವಕರ್ಮರ ಕೊಡುಗೆ: ಬಿಎಸ್‌ವೈ

ಅಮರಶಿಲ್ಪಿ ಜಕಣಾಚಾರಿ ಆರನೇ ಸಂಸ್ಮರಣಾ ದಿನಾಚರಣೆ l ವಿಶ್ವಕರ್ಮ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 1 ಜನವರಿ 2019, 20:01 IST
Last Updated 1 ಜನವರಿ 2019, 20:01 IST
ರಾಮ್‌ ವಿ.ಸುತಾರ್‌ ಅವರಿಗೆ ವಿಶ್ವಕರ್ಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. (ಎಡದಿಂದ) ರವಿಕುಮಾರ್, ಕೆ.ಪಿ. ನಂಜುಂಡಿ, ಬಿ.ಎಸ್. ಯಡಿಯೂರಪ್ಪ, ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿಶ್ವಕರ್ಮ ಮಠಾಧಿಪತಿಗಳ ಒಕ್ಕೂಟದ ಉಪಾಧ್ಯಕ್ಷ ಸೂರ್ಯನಾರಾಯಣ ಸ್ವಾಮೀಜಿ ಇದ್ದರು -–ಪ್ರಜಾವಾಣಿ ಚಿತ್ರ
ರಾಮ್‌ ವಿ.ಸುತಾರ್‌ ಅವರಿಗೆ ವಿಶ್ವಕರ್ಮ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. (ಎಡದಿಂದ) ರವಿಕುಮಾರ್, ಕೆ.ಪಿ. ನಂಜುಂಡಿ, ಬಿ.ಎಸ್. ಯಡಿಯೂರಪ್ಪ, ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ವಿಶ್ವಕರ್ಮ ಮಠಾಧಿಪತಿಗಳ ಒಕ್ಕೂಟದ ಉಪಾಧ್ಯಕ್ಷ ಸೂರ್ಯನಾರಾಯಣ ಸ್ವಾಮೀಜಿ ಇದ್ದರು -–ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಕಲ್ಯಾಣ ಚಾಲುಕ್ಯರು ಹಾಗೂ ಹೊಯ್ಸಳರ ಶೈಲಿಯ ದೇವಾಲಯಗಳನ್ನು ಬೇಲೂರು ಹಾಗೂ ಹಳೇಬೀಡಿನಲ್ಲಿ ನಿರ್ಮಿಸಿದ ಮೇರುವ್ಯಕ್ತಿ ಜಕಣಾಚಾರಿ. ಇಂಥ ಐತಿಹಾಸಿಕ ದೇವಸ್ಥಾನಗಳನ್ನು ನಿರ್ಮಿಸಿದ ಕೊಡುಗೆ ವಿಶ್ವಕರ್ಮ ಸಮಾಜದ್ದು’ ಎಂದು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಆಯೋಜಿಸಿದ್ದ ರಾಜ್ಯ ಮಟ್ಟದ ಅಮರಶಿಲ್ಪಿ ಜಕಣಾಚಾರಿ 6ನೇ ಸಂಸ್ಮರಣಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

‘ಬಿಜೆಪಿ ಅಧಿಕಾರದಲ್ಲಿದ್ದಾಗ ವಿಶ್ವಕರ್ಮ ಟ್ರಸ್ಟ್‌ಗೆ ಮತ್ತು ಜಕಣಾಚಾರಿ ಅವರ ಜನ್ಮಸ್ಥಳ ತುಮಕೂರಿನ ಕೈದಾಳದ ಅಭಿವೃದ್ಧಿಗೆ ತಲಾ ₹ 1 ಕೋಟಿ ನೀಡಲಾಗಿತ್ತು. ಚದುರಿ ಹೋದ ಸಮಾಜ ಬಾಂಧವರನ್ನು ಒಂದುಗೂಡಿಸಿ, ಸಮಾಜದ ದುರ್ಬಲ ವರ್ಗದ
ವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇನೆ’ ಎಂದರು.

ADVERTISEMENT

ಮಹಾಸಭಾದ ಅಧ್ಯಕ್ಷ ಕೆ.ಪಿ.ನಂಜುಂಡಿ, ‘ಪಟ್ಟಭದ್ರ ಹಿತಾಸಕ್ತಿಗಳು ಜಕಣಾಚಾರಿ ಕಾಲ್ಪನಿಕ ವ್ಯಕ್ತಿ ಎಂದು ಹೇಳಿದ್ದು, ಸರಿಯಲ್ಲ. ಭೂಮಿಯಲ್ಲಿ ಜನಿಸಿ ಜಗ ಮೆಚ್ಚುವಂತೆ ಶಿಲ್ಪಕಲೆಯಲ್ಲಿ ಮಹತ್ವದ ಸಾಧನೆ ಮಾಡಿದ. ಇಂಥವನನ್ನು ಕಾಲ್ಪನಿಕ ವ್ಯಕ್ತಿ ಎಂದು ಹೇಳುವುದು ನಾಡಿಗೆ ದ್ರೋಹ ಬಗೆದಂತೆ’ ಎಂದು ಹೇಳಿದರು.

‘ರಾಮ್‌ ವಿ.ಸುತಾರ್ ಅವರು ದೇಶದ ಎತ್ತರದ ಸ್ಮಾರಕಗಳನ್ನು ನಿರ್ಮಿಸಿದ್ದಾರೆ. ಅದೇ ರೀತಿ ಆಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಮೆ ನಿರ್ಮಾಣಕ್ಕಾಗಿ ಅವರಿಗೆ ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ಕೊಟ್ಟಿದೆ’ ಎಂದರು.

ಸುತಾರ್‌ಗೆ ವಿಶ್ವಕರ್ಮ ಪ್ರಶಸ್ತಿ

ಗುಜರಾತ್‌ನಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆಯ ಶಿಲ್ಪಿಕಾರ ರಾಮ್ ವಿ.ಸುತಾರ್ ಅವರಿಗೆ ‘ವಿಶ್ವಕರ್ಮ ಪ್ರಶಸ್ತಿ’ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿ ರೂ1 ಲಕ್ಷ ಮೊತ್ತ ಒಳಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.