ADVERTISEMENT

2022ರ ಆಗಸ್ಟ್‌ನಲ್ಲಿ ಅಮೆರಿಕದ 5 ಕಡೆ ಮಿನಿ ತಂತ್ರಜ್ಞಾನ ಸಮಾವೇಶ: ಅಶ್ವತ್ಥನಾರಾಯಣ

`ಅಕ್ಕ’ ರಾಜ್ಯೋತ್ಸವ ಉದ್ದೇಶಿಸಿ ಸಚಿವ ಮಾತು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2021, 7:42 IST
Last Updated 20 ನವೆಂಬರ್ 2021, 7:42 IST
   

ಬೆಂಗಳೂರು: 2022ರ ಆಗಸ್ಟ್ ತಿಂಗಳಲ್ಲಿ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯ ಐದು ಮಿನಿ ಸಮಾವೇಶಗಳನ್ನು ಅಮೆರಿಕದ ನಾನಾ ಕಡೆಗಳಲ್ಲಿ ನಡೆಸಲಾಗುವುದು. ಆ ದೇಶದಲ್ಲಿರುವ ಕನ್ನಡಿಗರು ತಮ್ಮ ವಾಣಿಜ್ಯ ವೇದಿಕೆಗಳ ಮೂಲಕ ಕರ್ನಾಟಕದಲ್ಲಿ ಹೆಚ್ಚು ಬಂಡವಾಳ ಹೂಡಿಕೆಗೆ ಮುಂದಡಿ ಇಡಬೇಕು ಎಂದು ಐಟಿ, ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.

ಉತ್ತರ ಅಮೆರಿಕದಲ್ಲಿರುವ ಕನ್ನಡ ಕೂಟಗಳ ಆಗರವಾಗಿರುವ `ಅಕ್ಕ’ ಸಂಘಟನೆಯು ಶನಿವಾರ ಆಚರಿಸಿದ 66ನೇ ಕನ್ನಡ ರಾಜ್ಯೋತ್ಸವವನ್ನು ಉದ್ದೇಶಿಸಿ ವರ್ಚುಯಲ್‌ ಆಗಿ ಮಾತನಾಡಿದ ಸಚಿವರು, `ಅಮೆರಿಕದಲ್ಲಿರುವ ಕನ್ನಡಿಗರು ಮತ್ತು ಭಾರತೀಯರು ಅಲ್ಲಿ ಪ್ರಬಲ ರಾಜಕೀಯ ಶಕ್ತಿ ಹೊಂದಿರುವ ಯಹೂದಿಗಳಿಗಿಂತ ಹೆಚ್ಚು ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ’ ಎಂದರು.

ಅಮೆರಿಕದಲ್ಲಿರುವ ಕನ್ನಡಿಗರು ರಾಜ್ಯ ಸರಕಾರ ಮತ್ತು ಆ ದೇಶಗಳ ನಡುವೆ ಕೊಂಡಿಯಂತೆ ಕೆಲಸ ಮಾಡುತ್ತಿರುವುದು ಗಮನಾರ್ಹವಾಗಿದೆ. ಈಗ ಅಮೆರಿಕದ ಕಂಪನಿಗಳಿಗೆ ಬೆಂಗಳೂರಿನಿಂದ ನುರಿತ ಮಾನವ ಸಂಪನ್ಮೂಲವನ್ನು ಒದಗಿಸಲು ಕರ್ನಾಟಕ ಸರಕಾರವು `ಸಿಲಿಕಾನ್ ವ್ಯಾಲಿ ಬ್ರಿಡ್ಜ್’ ಎನ್ನುವ ಹೊಸ ಉಪಕ್ರಮವನ್ನು ಆರಂಭಿಸಿದೆ ಎಂದು ಅವರು ನುಡಿದರು.

ADVERTISEMENT

ಕನ್ನಡಿಗರು ಕರ್ನಾಟಕಕ್ಕೆ ಸೀಮಿತವಾಗದೆ ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ, ವೈದ್ಯಕೀಯ ರಂಗಗಳಲ್ಲಿ ಛಾಪು ಮೂಡಿಸಿರುವುದು ಅನುಕರಣೀಯ ನಡೆಯಾಗಿದೆ. ಈಗಿನ ವರ್ಚುಯಲ್ ಮತ್ತು ಹೈಬ್ರಿಡ್ ಜಗತ್ತಿನಲ್ಲಿ ಅಮೆರಿಕದ ಕನ್ನಡಿಗರು ನಮಗೆ ಇನ್ನಷ್ಟು ಹತ್ತಿರವಾಗಿದ್ದಾರೆ ಎಂದು ಸಚಿವರು ಬಣ್ಣಿಸಿದರು.

ಎನ್ಇಪಿ ಮತ್ತು ಇನ್ನಿತರ ಉಪಕ್ರಮಗಳ ಮೂಲಕ ಹೊರನಾಡಿನಿಂದ ಬರುವ ವಿದ್ಯಾರ್ಥಿಗಳನ್ನು ಕನ್ನಡ ಕಲಿಯಲು ಪ್ರೋತ್ಸಾಹಿಸಲಾಗುತ್ತಿದೆ. ಇದಕ್ಕಾಗಿ ಆರು ತಿಂಗಳು ಮಾತ್ರ ಓದುವಂತಹ ಪಠ್ಯವನ್ನು ಅಳವಡಿಸಲಾಗಿದೆ. ಉನ್ನತ ಶಿಕ್ಷಣದಲ್ಲಿ ಕನ್ನಡವನ್ನು ಸಂಕಲ್ಪಬಲದ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ಅಮೆರಿಕದಲ್ಲಿರುವ ಕನ್ನಡಿಗರು ಸಾವಿರಾರು ಮೈಲಿ ಆಚೆ ಇದ್ದರೂ ತಮ್ಮ ಕರುಳಿನ ಭಾಷೆಯನ್ನು ಮರೆಯದೆ, ಅರ್ಥಪೂರ್ಣವಾಗಿ ಬೆಳೆಸುತ್ತಿದ್ದಾರೆ. ಇದು ಅನುಸರಣೀಯ ಮಾದರಿಯಾಗಿದೆ. ಇದರಿಂದ ಕನ್ನಡವು ಮತ್ತಷ್ಟು ಶಕ್ತಿಶಾಲಿಯಾಗಿ ಬೆಳೆಯುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್, ಅಕ್ಕ ಸಂಘಟನೆಯ ಅಧ್ಯಕ್ಷ ತುಮಕೂರು ದಯಾನಂದ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.