ADVERTISEMENT

ಆಲ್ಕೋ ಮೀಟರ್‌ಗಳ ಸಾಚಾತನ ಎಷ್ಟು: ಹೈಕೋರ್ಟ್‌

ಕುಡಿದು ವಾಹನ ಚಾಲನೆ ಆರೋಪಕ್ಕೆ ದಂಡ ವಿಧಿಸಿದ ಪ್ರಕರಣ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2025, 18:22 IST
Last Updated 28 ಆಗಸ್ಟ್ 2025, 18:22 IST
ಹೈಕೋರ್ಟ್‌
ಹೈಕೋರ್ಟ್‌   

ಬೆಂಗಳೂರು: ‘ಮದ್ಯಪಾನ ಮಾಡಿ ವಾಹನ ಚಲಾಯಿಸುವವರನ್ನು ತಡೆದು ಪರೀಕ್ಷಿಸುವ ಬ್ರೀಥ್‌ ಅನಲೈಸರ್‌ಗಳು (ಆಲ್ಕೋ ಮೀಟರ್‌) ದೋಷರಹಿತವಾಗಿವೆ ಎಂಬುದನ್ನು ಖಾತ್ರಿಪಡಿಸುವಿರಾ’ ಎಂದು ನಗರ ಸಂಚಾರಿ ಪೊಲೀಸರನ್ನು ಹೈಕೋರ್ಟ್‌ ಮೌಖಿಕವಾಗಿ ಪ್ರಶ್ನಿಸಿದೆ.

ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ ಆರೋಪದ ಮೇರೆಗೆ ಪೊಲೀಸರು ದಂಡ ವಿಧಿಸಿದ್ದನ್ನು ಪ್ರಶ್ನಿಸಿ ನಗರದ ಸಿ.ಅಜಯ್‌ ಕುಮಾರ್‌ ಕಶ್ಯಪ್‌ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ.ಶ್ಯಾಮ್‌ ಪ್ರಸಾದ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಪ್ರತಿವಾದಿಗಳಾದ ರಾಜ್ಯ ಸರ್ಕಾರ ಮತ್ತು ಸಂಚಾರ ಪೊಲೀಸ್‌ ಆಯುಕ್ತರಿಗೆ ನೋಟಿಸ್‌ ಜಾರಿಗೊಳಿಸಲು ಆದೇಶಿಸಿದೆ.

‘ಅರ್ಜಿದಾರರ ವಿರುದ್ಧ ಬಲವಂತದ ಕ್ರಮ ಜರುಗಿಸಬಾರದು’ ಎಂದು ಮಧ್ಯಂತರ ಆದೇಶ ನೀಡಿ ವಿಚಾರಣೆಯನ್ನು ವಿಚಾರಣೆಯನ್ನು ಸೆಪ್ಟೆಂಬರ್ 3ಕ್ಕೆ ಮುಂದೂಡಿದೆ.

ADVERTISEMENT

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ‘ಬ್ರೀಥ್‌ ಅನಲೈಸರ್‌ಗಳು ದೋಷದಿಂದ ಕೂಡಿವೆ ಎಂದು ಅರ್ಜಿದಾರರು ಪ್ರತಿಪಾದಿಸುತ್ತಿದ್ದಾರೆ. ಹಾಗಾಗಿ, ನಿಮ್ಮ ಬಳಿ ಇರುವ ಬ್ರೀಥ್‌ ಅನಲೈಸರ್‌ ಯಂತ್ರಗಳು ದೋಷರಹಿತವಾಗಿವೆ ಎಂದು ಖಚಿತಪಡಿಸಿಕೊಳ್ಳಲು ಪೊಲೀಸ್‌ ಇಲಾಖೆ ಸದ್ಯ ಜಾರಿಯಲ್ಲಿ ಇರಿಸಿರುವ ಕಾರ್ಯವಿಧಾನದ ಬಗ್ಗೆ ಲಿಖಿತ ವಿವರಣೆ ನೀಡಿ’ ಎಂದು ಸಂಚಾರ ಪೊಲೀಸರಿಗೆ ನಿರ್ದೇಶಿಸಿತು.

‘ವಾಹನ ಚಾಲಕರು ಕುಡಿದು ವಾಹನ ಚಲಾಯಿಸುತ್ತಿದ್ದಾರೆಯೇ ಎಂದು ಪರಿಶೀಲಿಸಲು ಸಂಚಾರ ಪೊಲೀಸರು ಬಳಸುವ ಬ್ರೀಥ್‌ ಅನಲೈಸರ್‌ಗಳನ್ನು ಯಾವುದೇ ರೀತಿಯಲ್ಲೂ ತಿರುಚಬಾರದು’ ಎಂದು ತಾಕೀತು ಮಾಡಿತು.

ಪ್ರಕರಣವೇನು?: ಮದ್ಯಪಾನ ಮಾಡಿ ವಾಹನ ಚಲಾಯಿಸುವುದನ್ನು ಪರಿಶೀಲಿಸುವ ವೇಳೆ ಸಂಚಾರ ಠಾಣೆಯ ಪೊಲೀಸರು ಅರ್ಜಿದಾರರ ಕಾರನ್ನು ತಡೆದಿದ್ದರು. ಪರೀಕ್ಷೆ ವೇಳೆ ಅನಲೈಸರ್‌ ಮೊದಲ ಬಾರಿ ನಕಾರಾತ್ಮಕ ಫಲಿತಾಂಶ ನೀಡಿತ್ತು. ಆಗ ಪೊಲೀಸರು ಮತ್ತೆ ಅಲ್ಕೋ ಮೀಟರ್‌ ಅನ್ನು ಊದುವಂತೆ ಅರ್ಜಿದಾರರಿಗೆ ಒತ್ತಾಯಿಸಿದ್ದರು. ಮೂರನೇ ಬಾರಿಗೆ ಬ್ರೀಥ್ ಅನಲೈಸರ್‌ ಧನಾತ್ಮಕ ಫಲಿತಾಂಶ ನೀಡಿತ್ತು.

ಆಗ ಅರ್ಜಿದಾರರು ‘ನಾನು ಮದ್ಯ ಸೇವನೆ ಮಾಡಿಲ್ಲ’ ಎಂದು ಹೇಳಿದ್ದರೂ ಪೊಲೀಸರು ಅವರಿಗೆ ₹10 ಸಾವಿರ ದಂಡ ವಿಧಿಸಿದ್ದರು. ಇದಕ್ಕೆ ಪ್ರತಿಯಾಗಿ ಅರ್ಜಿದಾರರು, ‘ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ನನ್ನ ರಕ್ತ ಪರೀಕ್ಷೆ ಮಾಡಿಸೋಣ ಬನ್ನಿ ಎಂದು ಪೊಲೀಸರನ್ನು ಕರೆದೆ. ಆದರೆ ಬರಲಿಲ್ಲ. ಬದಲಿಗೆ ದಂಡ ವಿಧಿಸಿ ನನ್ನ ವಾಹನವನ್ನು ವಶಪಡಿಸಿಕೊಂಡರು’ ಎಂದು ಆರೋಪಿಸಿದ್ದಾರೆ.

‘ಘಟನೆ ನಂತರ ಖಾಸಗಿ ಲ್ಯಾಬ್‌ಗೆ ಹೋಗಿ ನನ್ನ ರಕ್ತ ಪರೀಕ್ಷೆ ಮಾಡಿಸಿಕೊಂಡಾಗ ಮದ್ಯ ಸೇವನೆಯ ಯಾವುದೇ ಲಕ್ಷಣಗಳೂ ನನ್ನ ದೇಹದಲ್ಲಿ ಕಂಡುಬಂದಿರಲಿಲ್ಲ. ನನ್ನನ್ನು ಪರೀಕ್ಷಿಸುವ ಮೊದಲು ಉಪಕರಣವನ್ನು ಪರೀಕ್ಷೆಗೆ ಒಳಪಡಿಸಿಲ್ಲ’ ಎಂದು ಆಕ್ಷೇಪಿಸಿದ್ದಾರೆ. 

ಮದ್ಯಪಾನ ಮಾಡಿ ವಾಹನ ಚಲಾಯಿಸುವವರು ಮೊದಲ ಬಾರಿ ಸಿಕ್ಕಿಬಿದ್ದರೆ ₹10 ಸಾವಿರ ದಂಡ ಅಥವಾ ಆರು ತಿಂಗಳ ಜೈಲು ಶಿಕ್ಷೆ ಮತ್ತು ಎರಡನೇ ಬಾರಿಗೆ ಅಪರಾಧ ಎಸಗಿದರೆ ₹15 ಸಾವಿರ ದಂಡ ತೆರಬೇಕಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.