ADVERTISEMENT

ಅಲೆಮಾರಿ, ಅರೆ ಅಲೆಮಾರಿ ‘ಸಮನ್ವಯ ಸಮಿತಿ’ ರಚನೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2023, 19:24 IST
Last Updated 15 ಜುಲೈ 2023, 19:24 IST
   

ಬೆಂಗಳೂರು: ಪರಿಶಿಷ್ಟ ಜಾತಿಯ 51, ಪರಿಶಿಷ್ಟ ಪಂಗಡದ 23 ಮತ್ತು ಹಿಂದುಳಿದ ವರ್ಗಗಳ 46 ಹೀಗೆ ಒಟ್ಟು 120 ಅಲೆಮಾರಿ, ಅರೆ ಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸುವ ಏಳು ಸಂಘಟನೆಗಳು ಒಗ್ಗೂಡಿ ‘ಕರ್ನಾಟಕ ಅಲೆಮಾರಿ, ಅರೆಅಲೆಮಾರಿ ವಿಮುಕ್ತ ಬುಡಕಟ್ಟುಗಳ ಸಮನ್ವಯ ಸಮಿತಿ’ ರಚಿಸಿಕೊಂಡಿವೆ.

ಗಾಂಧಿ ಭವನದಲ್ಲಿ ಇತ್ತೀಚೆಗೆ ನಡೆದ ಅಲೆಮಾರಿ, ಅರೆಅಲೆಮಾರಿ ಮತ್ತು ವಿಮುಕ್ತ ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸುವ ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.

ಈ ಸಮಿತಿಯ ರಾಜ್ಯ ಘಟಕದ ಪ್ರಧಾನ ಸಂಚಾಲಕರಾಗಿ ಶೇಷಪ್ಪ ಅಂದೊಳ್ಳು, ವಿವಿಧ ಅಲೆಮಾರಿ ಸಂಘಟನೆಗಳ ರಾಜ್ಯ ಘಟಕದ ಅಧ್ಯಕ್ಷರಾದ ವೆಂಕಟರಮಣಯ್ಯ, ಆರ್‌. ರಂಗಪ್ಪ, ತುಕಾರಾಮ್ ಶಾಸ್ತ್ರಿ, ಶ್ರೀನಿವಾಸ್, ಶಿವಾನಂದ ಪಾಚಂಗಿ ಮತ್ತು ಬಿ.ಆರ್. ಲೋಹಿತಾಕ್ಷ ಅವರನ್ನು ಸಂಚಾಲಕರನ್ನಾಗಿ, ಕಿರಣ್ ಕುಮಾರ್ ಕೊತ್ತಗೆರೆ, ಟಿ.ವಿ. ಗೋಪಾಲಕೃಷ್ಣ ಮತ್ತು ಮಲ್ಲಿಕಾರ್ಜುನ ಮಾನ್ಪಡೆ ಅವರನ್ನು ಸಂಘಟನಾ ಸಂಚಾಲಕರಾಗಿ ಆಯ್ಕೆ ಮಾಡಲಾಗಿದೆ.

ADVERTISEMENT

‘ಎಸ್.ಜಿ. ಸಿದ್ದರಾಮಯ್ಯ ಮತ್ತು ಇಂದೂಧರ ಹೊನ್ನಾಪುರ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ 50 ಪ್ರತಿನಿಧಿಗಳನ್ನು ಒಳಗೊಂಡ ಈ ಸಮನ್ವಯ ಸಮಿತಿ ರಚಿಸಲಾಗಿದೆ. ಸಮುದಾಯದ ಸಂವಿಧಾನಬದ್ಧ ಹಕ್ಕುಗಳನ್ನು ಪಡೆಯಲು, ಪ್ರಮುಖ ವಿಷಯಗಳು, ಸಮಸ್ಯೆಗಳು ಅಹವಾಲುಗಳ ಕುರಿತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆ ಪತ್ರ ವ್ಯವಹಾರ ಮಾಡಲು ಈ ಸಮಿತಿಗೆ ಅಧಿಕಾರ ನೀಡಲಾಗಿದೆ’ ಎಂದು ಕಿರಣ್ ಕುಮಾರ್ ಕೊತ್ತಗೆರೆ ತಿಳಿಸಿದ್ದಾರೆ.

‘ಮುಖ್ಯಮಂತ್ರಿ ಮತ್ತು ಸಂಬಂಧಪಟ್ಟ ಸಚಿವರನ್ನು ಸಮಿತಿಯ ನಿಯೋಗವು ತುರ್ತಾಗಿ ಭೇಟಿ ಮಾಡಿ ಅಲೆಮಾರಿ ಸಮುದಾಯಗಳ ಗಂಭೀರ ಸಮಸ್ಯೆ, ಶಾಶ್ವತ ಆಯೋಗ, ವಸತಿ ಮತ್ತು ಮೂಲಸೌಕರ್ಯ, ನಿಗಮಗಳಿಗೆ ಅನುದಾನ ಮತ್ತಿತರ ವಿಷಯಗಳ ಕುರಿತು ಚರ್ಚಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.