ADVERTISEMENT

ಪ್ರತ್ಯೇಕ ವಾಸ: ಜೀವನಾಂಶಕ್ಕೆ ಅರ್ಹ

ಕಿರುಕುಳಕ್ಕೆ ಬೇಸತ್ತ ಪತ್ನಿಯ ನಿಲುವಿಗೆ ಹೈಕೋರ್ಟ್‌ ಸಮರ್ಥನೆ

​ಪ್ರಜಾವಾಣಿ ವಾರ್ತೆ
Published 5 ಮೇ 2022, 19:32 IST
Last Updated 5 ಮೇ 2022, 19:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕಿರುಕುಳಕ್ಕೆ ಬೇಸತ್ತು ಗಂಡನ ಮನೆ ತೊರೆದು ಪ್ರತ್ಯೇಕವಾಗಿ ವಾಸಿಸುತ್ತಿರುವ ಪತ್ನಿ ಜೀವನಾಂಶ ಪಡೆಯಲು ಅರ್ಹಳು’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

‘ಜೀವನಾಂಶ ಕೋರಿ ನನ್ನ ಪತ್ನಿ ದೊಡ್ಡಬಳ್ಳಾಪುರದ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ರದ್ದುಪಡಿಸಬೇಕು’ ಎಂದು ಕೋರಿ ಪತಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಇಂತಹ ಪ್ರಕರಣದಲ್ಲಿ ಸ್ವಇಚ್ಛೆ ಹಾಗೂ ಪರಸ್ಪರ ಒಪ್ಪಂದದ ಮೇರೆಗೆ ಪತ್ನಿ ಮನೆಬಿಟ್ಟು ಹೋಗಿದ್ದಾಳೆ ಎಂಬುದಾಗಿ ಪ್ರತಿಪಾದಿಸಲು ಪತಿಗೆ ಅವಕಾಶವಿಲ್ಲ’ ಎಂದು ಸ್ಪಷ್ಟಪಡಿಸಿದೆ.

‘ಇಂತಹ ಪ್ರಕರಣದಲ್ಲಿ ಪತ್ನಿಗೆ ಜೀವನಾಂಶ ನೀಡಲು ಗಂಡ ನಿರಾಕರಿಸುವಂತಿಲ್ಲ. ಗಂಡನಿಂದ ಜೀವನಾಂಶ ಪಡೆಯಲು ಪತ್ನಿ ಅರ್ಹಳಾಗಿರುತ್ತಾಳೆ’ ಎಂದು ಹೇಳಿರುವ ನ್ಯಾಯಪೀಠ, ಪತಿಯ ಅರ್ಜಿಯನ್ನು ವಜಾಗೊಳಿಸಿದೆ.

ADVERTISEMENT

‘ಪತಿ ಹಾಗೂ ಅತ್ತೆ ತನಗೆ ತುಂಬಾ ಕಿರುಕುಳ ನೀಡುತ್ತಿದ್ದರು. ಅತ್ತೆಯ ಒತ್ತಾಯದಿಂದಲೇ ನನ್ನ ಪತಿ ನನ್ನನ್ನು ಮನೆಯಿಂದ ಹೊರಹಾಕಿದ್ದಾರೆ. ಅವರಿಬ್ಬರ ಕಿರುಕುಳ ಸಹಿಸಲಾಗದೆ ನಾನು ನನ್ನ ಗಂಡನ ಮನೆ ತೊರೆದು ಬೇರೊಂದು ಮನೆಯಲ್ಲಿ ವಾಸ ಮಾಡುತ್ತಿದ್ದೇನೆ ಎಂದು ಪತ್ನಿ ವಿಚಾರಣಾನ್ಯಾಯಾಲಯದಲ್ಲಿ ಜೀವನಾಂಶ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿಸ್ಪಷ್ಟವಾಗಿ ವಿವರಿಸಿದ್ದಾರೆ. ಹೀಗಿರುವಾಗ, ಇಂತಹ ಪರಿಸ್ಥಿತಿಯಲ್ಲಿ, ಪರಸ್ಪರ ಒಪ್ಪಂದದ ಮೇರೆಗೆ ನನ್ನ ಪತ್ನಿ ಬೇರೊಂದು ಮನೆಯಲ್ಲಿ ವಾಸ ಮಾಡುತ್ತಿದ್ದಾಳೆ ಎಂಬ ಪತಿಯ ವಾದವನ್ನು ಸಮರ್ಥಿಸಲು ಆಗದು’ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಕರಣವೇನು?:ಅರ್ಜಿದಾರ ಪತಿ ಮತ್ತು ಪ್ರತಿವಾದಿ ಪತ್ನಿ2016ರ ನವೆಂಬರ್‌ 1ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಕೆಲವೇ ವರ್ಷಗಳಲ್ಲಿ ಅವರ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಕಿರುಕುಳ, ಶಾಂತಿಭಂಗದ ಉದ್ದೇಶ ಹಾಗೂ ಅವಮಾನಪಡಿಸಿದ ಆರೋಪಗಳ ಅಡಿಯಲ್ಲಿ ಪತ್ನಿ ತನ್ನ ಗಂಡನ ವಿರುದ್ಧ 2020ರ ಡಿಸೆಂಬರ್ 7ರಂದು ಪೊಲೀಸರಿಗೆ ದೂರು ನೀಡಿದ್ದರು. ನಂತರ ಜೀವನಾಂಶ ಕೋರಿ ದೊಡ್ಡಬಳ್ಳಾಪುರ ಜೆಎಂಎಫ್‌ಸಿಗೆ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ ಮೆಟ್ಟಿಲೇರಿದ್ದರು. ‘ಪತ್ನಿಸ್ವಇಚ್ಛೆಯಿಂದ ಮನೆ ತೊರೆದು ಹೋಗಿದ್ದಾಳೆ. ಆಕೆಗೆ ಜೀವನಾಂಶ ನೀಡಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.