ADVERTISEMENT

ಮಾದಕವಸ್ತು ನಿಯಂತ್ರಣಕ್ಕೆ ಪರಿಷತ್‌ನಲ್ಲಿ ಒಕ್ಕೊರಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2022, 16:12 IST
Last Updated 7 ಮಾರ್ಚ್ 2022, 16:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಮಾದಕವಸ್ತು ಪೂರೈಕೆ ಮತ್ತು ಸೇವನೆಯಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರನ್ನು ರಕ್ಷಿಸಲು ಬಿಗಿಯಾದ ಕ್ರಮ ಕೈಗೊಳ್ಳುವಂತೆ ಎಲ್ಲ ಪಕ್ಷಗಳ ಸದಸ್ಯರು ಸರ್ಕಾರವನ್ನು ವಿಧಾನ ಪರಿಷತ್‌ನಲ್ಲಿ ಸೋಮವಾರ ಒಕ್ಕೊರಲಿನಿಂದ ಆಗ್ರಹಿಸಿದರು.

ಮಾದಕವಸ್ತು ಮಾರಾಟ ಜಾಲ ರಾಜ್ಯದಾದ್ಯಂತ ವ್ಯಾಪಿಸುತ್ತಿರುವ ಕುರಿತು ನಿಯಮ 330ರ ಅಡಿಯಲ್ಲಿ ವಿಷಯ ಪ್ರಸ್ತಾಪಿಸಿ ಚರ್ಚೆ ನಡೆಸಿದ ಬಿಜೆಪಿಯ ಶಶೀಲ್‌ ಜಿ. ನಮೋಶಿ, ವೈ.ಎ. ನಾರಾಯಣಸ್ವಾಮಿ, ಅರುಣ್‌ ಶಹಾಪುರ, ಎಸ್‌.ವಿ. ಸಂಕನೂರ, ಅ. ದೇವೇಗೌಡ, ಭಾರತಿ ಶೆಟ್ಟಿ, ಲಹರ್‌ ಸಿಂಗ್‌ ಸಿರೋಯ, ಆಯನೂರು ಮಂಜುನಾಥ, ಕಾಂಗ್ರೆಸ್‌ನ ಎಸ್‌. ರವಿ, ಸಲೀಂ ಅಹ್ಮದ್‌ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.

‘ಬೆಂಗಳೂರು ಉಡ್ತಾ ಪಂಜಾಬ್‌ ಆಗದಂತೆ ತಡೆಯುವುದಾಗಿ ಹಿಂದೆ ಗೃಹ ಸಚಿವರಾಗಿದ್ದ ಜಿ. ಪರಮೇಶ್ವರ ಭರವಸೆ ನೀಡಿದ್ದರು. ಈಗಲೂ ಪರಿಸ್ಥಿತಿ ಬದಲಾಗಿಲ್ಲ. ಮುಖ್ಯಮಂತ್ರಿಯವರ ಮನೆಗೆ ಭದ್ರತೆ ನೀಡಲು ನಿಯೋಜಿಸಿದ ಪೊಲೀಸರೂ ಮಾದಕವಸ್ತು ಮಾರಾಟದಲ್ಲಿ ಭಾಗಿಯಾಗಿದ್ದಾರೆ’ ಎಂದು ನಮೋಶಿ ಹೇಳಿದರು.

ADVERTISEMENT

ಎಸ್‌.ರವಿ. ಮಾತನಾಡಿ, ‘ಪೊಲೀಸ್‌ ಇಲಾಖೆಯ ಕ್ರಮದ ಜತೆಗೆ ಜಾಗೃತಿ ಮೂಡಿಸುವ ಕೆಲಸವೂ ಆಗಬೇಕು’ ಎಂದು ಸಲಹೆ ನೀಡಿದರು. ‘ಐದು ವರ್ಷದಿಂದ ಇದೇ ಚರ್ಚೆ ನಡೆಯುತ್ತಿದೆ. ಕ್ರಮವೇ ಆಗದಿದ್ದರೆ, ಚರ್ಚೆ ಏಕೆ ಬೇಕು’ ಎಂದು ಭಾರತಿ ಶೆಟ್ಟಿ ಆಕ್ರೋಶದಿಂದ ಪ್ರಶ್ನಿಸಿದರು.

‘ಮಾದಕವಸ್ತು ಪ್ರಕರಣಗಳಲ್ಲಿ ರಾಜಕಾರಣಿಗಳು ಪ್ರಭಾವ ಬೀರುತ್ತಿದ್ದಾರೆ. ಈ ಕಾರಣದಿಂದಾಗಿಯೇ ನಿಯಂತ್ರಣ ಸಾಧ್ಯವಾಗುತ್ತಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆಯೇ ಈಗಿನ ಸಮಸ್ಯೆಗೆ ಕಾರಣ’ ಎಂದು ಲಹರ್‌ ಸಿಂಗ್‌ ದೂರಿದರು.

ಮಾದಕವಸ್ತು ಪೂರೈಕೆದಾರರನ್ನು ಎನ್‌ಕೌಂಟರ್‌ ಮಾಡಲು ವಿಶೇಷ ಪಡೆ ರಚಿಸುವಂತೆ ಸಲೀಂ ಅಹ್ಮದ್‌ ಒತ್ತಾಯಿಸಿದರು. ‘ಈ ವಿಚಾರದಲ್ಲಿ ಪೊಲೀಸರಿಗೆ ಎಲ್ಲವೂ ಗೊತ್ತಿದೆ. ಅವರ ಸಹಕಾರದಿಂದಲೇ ವ್ಯವಹಾರ ನಡೆಯುತ್ತಿದೆ’ ಎಂದು ಆಯನೂರು ಹೇಳಿದರು.

ಚರ್ಚೆಗೆ ಉತ್ತರ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಮಾದಕವಸ್ತು ಮಾರಾಟ ಮತ್ತು ಬಳಕೆ ವಿರುದ್ಧ ಸರ್ಕಾರ ಬಿಗಿಯಾದ ಕ್ರಮ ಕೈಗೊಂಡಿದೆ. 2019ರಲ್ಲಿ 1661 ಪ್ರಕರಣ ದಾಖಲಿಸಲಾಗಿತ್ತು. 2,219 ಭಾರತೀಯರು ಮತ್ತು 44 ವಿದೇಶಿಯರನ್ನು ಬಂಧಿಸಲಾಗಿತ್ತು. 2020ರಲ್ಲಿ 4,054 ಪ್ರಕರಣ ದಾಖಲಿಸಿ, 5,220 ಭಾರತೀಯರು ಮತ್ತು 71 ವಿದೇಶಿಯರನ್ನು ಬಂಧಿಸಲಾಗಿದೆ. 2021ರಲ್ಲಿ 5,785 ಪ್ರಕರಣಗಳಲ್ಲಿ 7,661 ಭಾರತೀಯರು ಮತ್ತು 185 ವಿದೇಶಿಯರನ್ನು ಬಂಧಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಪ್ರಚಾರಕ್ಕಾಗಿ ನಟಿಯರ ಮೇಲೆ ದಾಳಿ’

‘ಮಾದಕವಸ್ತು ಪೂರೈಕೆ, ಸೇವನೆ ಆರೋಪದ ಮೇಲೆ ಆಗಾಗ ಪ್ರಕರಣ ದಾಖಲಿಸಿ, ಆರೋಪಿಗಳನ್ನು ಬಂಧಿಸಲಾಗುತ್ತದೆ. ಸಿನಿಮಾ ನಟಿಯರನ್ನು ಬಂಧಿಸಿದಾಗ ಹೆಚ್ಚು ಪ್ರಚಾರ ದೊರಕುತ್ತದೆ. ಹೀಗೆ ಪ್ರಚಾರದ ಮೂಲಕ ಜಾಗೃತಿ ಮೂಡಲಿ ಎಂದು ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗರ್ಲಾನಿ ಮೇಲೆ ದಾಳಿ ನಡೆಸಿದ್ದಾಗಿ ಪೊಲೀಸ್‌ ಅಧಿಕಾರಿಗಳು ನನ್ನ ಬಳಿ ಹೇಳಿದ್ದರು’ ಎಂದು ಗೃಹ ಸಚಿವ ಜ್ಞಾನೇಂದ್ರ ಸದನಕ್ಕೆ ತಿಳಿಸಿದರು.

‘ನಾಯಕರೇ ಜವಾಬ್ದಾರಿ ಹೊರಬೇಕು’

‘ಮಾದಕವಸ್ತು ನಿಯಂತ್ರಣದ ವಿಚಾರದಲ್ಲಿ ಸಾರ್ವಜನಿಕ ಜೀವನದಲ್ಲಿರುವ ನಾಯಕರು ಜವಾಬ್ದಾರಿ ಹೊರಬೇಕು. ನಮ್ಮ ಪ್ರದೇಶ, ಕ್ಷೇತ್ರದಲ್ಲಿ ಈ ಪಿಡುಗು ಇರಕೂಡದು ಎಂದು ಬಯಸಿದರೆ ಯಾವುದೂ ಇರುವುದಿಲ್ಲ. ಬೆಂಗಳೂರಿನ ಕೋದಂಡರಾಮಪುರದಲ್ಲಿ 25 ವರ್ಷಗಳ ಕಾಲ ಒಂದು ಅಪರಾಧ ಪ್ರಕರಣವೂ ನಡೆಯದಂತೆ ನಾವು ತಡೆದಿದ್ದೆವು’ ಎಂದು ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.