ADVERTISEMENT

‘ಮೈತ್ರಿ’ ಅಸ್ಥಿರಗೊಳಿಸಲು ಅತೃಪ್ತರೇ ಅಸ್ತ್ರ?

ಬಿಜೆಪಿಯಿಂದ ಸದ್ದಿಲ್ಲದೆ ಮತ್ತೆ ಕಾರ್ಯತಂತ್ರ ಶುರುವಾಗುವ ಅನುಮಾನ

​ಪ್ರಜಾವಾಣಿ ವಾರ್ತೆ
Published 22 ಜನವರಿ 2019, 19:38 IST
Last Updated 22 ಜನವರಿ 2019, 19:38 IST

ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನವನ್ನು ಬಿಜೆಪಿ ಮತ್ತೆ ಸದ್ದಿಲ್ಲದೆ ಆರಂಭಿಸಿದ್ದು, ಈ ಬಾರಿ ಅತೃಪ್ತ ‘ಕೈ’ ಶಾಸಕರನ್ನೇ ಈ ಉದ್ದೇಶಕ್ಕೆ ‘ಅಸ್ತ್ರ’ವಾಗಿ ಬಳಸಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಈಗಲ್ಟನ್‌ ರೆಸಾರ್ಟ್‌ನಲ್ಲಿ ಬಲವಂತವಾಗಿ ವಾಸ್ತವ್ಯ ಹೂಡಿದ್ದ ‘ಕೈ’ ಶಾಸಕರು, ಸಿದ್ದಗಂಗಾ ಶ್ರೀಗಳ ನಿಧನ ಸುದ್ದಿ ಬರುತ್ತಿದ್ದಂತೆ ‘ಸ್ವತಂತ್ರ’ರಾಗಿದ್ದಾರೆ. ‌ಅತೃಪ್ತಿ ಉಳಿಸಿಕೊಂಡಿದ್ದ ಶಾಸಕರನ್ನು ‘ಆಪ್ತ ಸಮಾಲೋಚನೆ’ ಮೂಲಕ ಮನಪರಿವರ್ತಿಸುವ ಕಾಂಗ್ರೆಸ್‌ ನಾಯಕರ ಯತ್ನಕ್ಕೆ ಇದರಿಂದಾಗಿ ಅಡ್ಡಿಯಾಗಿದೆ.

ಈ ಮಧ್ಯೆ, ರೆಸಾರ್ಟ್‌ನಲ್ಲಿ ಕುಡಿದ ಮತ್ತಿನಲ್ಲಿ ಶಾಸಕರ ಮಧ್ಯೆ ನಡೆದ ವಾಗ್ವಾದ ವೇಳೆ ಹೊಸಪೇಟೆ ಶಾಸಕ ಆನಂದ್‌ ಸಿಂಗ್‌ ಮೇಲೆ ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ನಡೆಸಿದ ಹಲ್ಲೆ ಕಾಂಗ್ರೆಸ್‌ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ADVERTISEMENT

ಬಿಜೆಪಿಯ ‘ಆಪರೇಷನ್‌ ಕಮಲ’ದ ಪಟ್ಟಿಯಲ್ಲಿ ಗಣೇಶ್‌ ಕೂಡಾ ಇದ್ದರು. ಕಾಂಗ್ರೆಸ್‌ನ ಅತೃಪ್ತ ನಾಲ್ವರು ಶಾಸಕರು (ರಮೇಶ ಜಾರಕಿಹೊಳಿ, ಬಿ. ನಾಗೇಂದ್ರ, ಮಹೇಶ ಕುಮಟಳ್ಳಿ, ಉಮೇಶ ಜಾಧವ್) ಬಿಜೆಪಿ ಕಡೆಗೆ ವಾಲುವುದು ಬಹುತೇಕ ಖಚಿತ. ಪಕ್ಷೇತರರಿಬ್ಬರು (ಎಚ್‌. ನಾಗೇಶ್‌, ಆರ್‌. ಶಂಕರ್‌) ಈಗಾಗಲೇ ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಮೈತ್ರಿ ಸರ್ಕಾರ ಬಹುಮತ ಕಳೆದುಕೊಳ್ಳಲು ಕೆಲವೇ ಶಾಸಕರ ಅಗತ್ಯ ಇರುವುದರಿಂದ ಕಾಂಗ್ರೆಸ್ ಕೂಡ ಬೆಳವಣಿಗೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಅತೃಪ್ತ ಶಾಸಕರನ್ನು ಮನವೊಲಿಸುವ ಕೆಲಸಕ್ಕೆ ಬಿಜೆಪಿ ಮತ್ತೆ ಕೈಹಾಕುವುದು ಖಚಿತವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್ ಸಿಂಗ್ ಅತೃಪ್ತರ ಬಣದಲ್ಲಿ ಗುರುತಿಸಿಕೊಳ್ಳಬಹುದೆಂಬ ಅನುಮಾನ ಕಾಂಗ್ರೆಸ್ ನಾಯಕರಲ್ಲಿದೆ. ಅತೃಪ್ತ ಬಣದ ಶಾಸಕರೊಬ್ಬರು ಆನಂದ್ ಸಿಂಗ್ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದಾರೆ ಎನ್ನಲಾಗಿದ್ದು, ತಮ್ಮ ಜತೆ ಸೇರುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಅತೃಪ್ತರ ಸಂಖ್ಯೆಯನ್ನು ಸದ್ಯ ನಾಲ್ಕಕ್ಕೆ ಇಳಿಸಿರುವ ಮೈತ್ರಿ ಪಕ್ಷದ ನಾಯಕರಿಗೆ ಈಗ ಹೊಸ ಸವಾಲು ಎದುರಾಗಿದ್ದು, ಬಜೆಟ್ ಅಧಿವೇಶನದೊಳಗೆ ಸರ್ಕಾರ ಅಸ್ಥಿರಗೊಳ್ಳುವ ಪ್ರಯತ್ನ ಇನ್ನಷ್ಟು ತೀವ್ರವಾಗಿ ನಡೆಯಲಿದೆ ಎಂದೂ ಹೇಳಲಾಗುತ್ತಿದೆ.

ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಗೆ ಗೈರಾದ ಕಾರಣಕ್ಕೆ ನಾಲ್ವರು ಶಾಸಕರಿಗೆ ಕಾಂಗ್ರೆಸ್‌ ನೋಟಿಸ್ ನೀಡಿದೆ.

ಆದರೆ, ನೋಟಿಸ್‌ಗೆ ಈ ಶಾಸಕರು ಇನ್ನೂ ಉತ್ತರ ನೀಡಿಲ್ಲ. ಅದರ ಬದಲು, ಇನ್ನಷ್ಟು ಶಾಸಕರನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದಾರೆ ಎಂದೂ ಹೇಳಲಾಗಿದೆ.

ರಮೇಶ ಜಾರಕಿಹೊಳಿ ಹತಾಶ: ಸಂಪುಟದಿಂದ ಕೈಬಿಟ್ಟ ಬಳಿಕ ‘ಕೈ’ಗೆ ಸಿಗದೆ ಓಡಾಡುತ್ತಿದ್ದ ರಮೇಶ ಜಾರಕಿಹೊಳಿ, ಪಕ್ಷಾಂತರ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ, ಅವರ ಪ್ರಯತ್ನಕ್ಕೆ ಈವರೆಗೆ ಬೆಂಬಲ ಸಿಗದಿರುವುದರಿಂದ ಅವರು ತೀವ್ರ ಹತಾಶರಾಗಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.