ADVERTISEMENT

ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಸ್ಥಗಿತ: ಹಿಂಗಾರು ಹಂಗಾಮಿಗೆ ನೀರಿನ ಕೊರತೆ

ಚುನಾವಣೆ ಹಿನ್ನೆಲೆ: ಐಸಿಸಿ ಸಭೆ ವಿಳಂಬ, ಫೆ15 ರವರೆಗೆ ಮಾತ್ರ ನೀರು ಹರಿಸಲು ಸಾಧ್ಯ?

ಚಂದ್ರಶೇಖರ ಕೊಳೇಕರ
Published 17 ನವೆಂಬರ್ 2021, 19:30 IST
Last Updated 17 ನವೆಂಬರ್ 2021, 19:30 IST
ಆಲಮಟ್ಟಿ ಜಲಾಶಯದ ಚಿತ್ರ
ಆಲಮಟ್ಟಿ ಜಲಾಶಯದ ಚಿತ್ರ   

ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ ಒಳಹರಿವು ಕಳೆದ ವರ್ಷಕ್ಕಿಂತ 23 ದಿನ ಮೊದಲೇ ಸ್ಥಗಿತಗೊಂಡಿದ್ದರಿಂದ ಈ ಬಾರಿ ಕೃಷ್ಣಾ ಅಚ್ಚುಕಟ್ಟು ಪ್ರದೇಶದ ಎಲ್ಲ ಕಾಲುವೆಗಳಿಗೆ ಹಿಂಗಾರು ಹಂಗಾಮಿಗೆ ಪೂರ್ಣ ಪ್ರಮಾಣದಲ್ಲಿ ನೀರು ಹರಿಸಲು ಸಾಧ್ಯವಾಗುತ್ತಿಲ್ಲ.

ಮುಂಗಾರು ಹಂಗಾಮಿಗೆ ನ.19 ರ ವರೆಗೆ ನೀರು ಕಾಲುವೆಗೆ ಹರಿಯಲಿದ್ದು, ನಂತರ ನ.30 ರ ವರೆಗೆ ಕಾಲುವೆಗೆ ನೀರು ಹರಿಸುವುದು ಸ್ಥಗಿತಗೊಳ್ಳಲಿದೆ.

ಈ ಬಾರಿ ಹೆಚ್ಚು ನೀರು ಕಾಲುವೆಗೆ ಹರಿಸಿದ್ದು, ನೀರಾವರಿ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿ ಹೆಚ್ಚಿದ್ದು, ಒಳಹರಿವು ನಿರೀಕ್ಷೆಗಿಂತ ಮೊದಲೇ ಸ್ಥಗಿತಗೊಂಡ ಕಾರಣ ಹಿಂಗಾರಿಗೆ ನೀರಿನ ಕೊರತೆ ಹೆಚ್ಚಿದೆ.

ADVERTISEMENT

55 ಟಿಎಂಸಿ ಅಡಿ ನೀರು ಮಾತ್ರ ಲಭ್ಯ:ಆಲಮಟ್ಟಿ ಹಾಗೂ ನಾರಾಯಣಪುರ ಜಲಾಶಯ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸಿದ ನಂತರ ಎರಡು ಜಲಾಶಯ ಸೇರಿ 95 ಟಿಎಂಸಿ ಅಡಿಯವರೆಗೆ ನೀರು ಉಳಿಯಬಹುದು. ಅದರಲ್ಲಿ ಎರಡು ಜಲಾಶಯ ವ್ಯಾಪ್ತಿಯಲ್ಲಿ ಜೂನ್ 2022 ರವರೆಗೆ ಕುಡಿಯುವ ನೀರು, ಭಾಷ್ಪಿಕರಣ, ಕೈಗಾರಿಕೆ, ವಿದ್ಯುತ್ ಸ್ಥಾವರ ಸೇರಿ ನಾನಾ ಬಳಕೆಗೆ ಸುಮಾರು 40 ಟಿಎಂಸಿ ಅಡಿಯಷ್ಟು ನೀರು ಸಂಗ್ರಹ ಅಗತ್ಯ.

ಹೀಗಾಗಿ ಹಿಂಗಾರು ಹಂಗಾಮಿಗೆ ನೀರಾವರಿಗಾಗಿ 50 ರಿಂದ 55 ಟಿಎಂಸಿ ಅಡಿಯವರೆಗೆ ಮಾತ್ರ ನೀರು ಲಭ್ಯವಾಗುತ್ತದೆ. ನಿತ್ಯ ಎರಡು ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ 1.2 ಟಿಎಂಸಿ ಅಡಿಯಷ್ಟು ನೀರು ಅಗತ್ಯ. ಹೀಗಾಗಿ ಸುಮಾರು 50 ದಿನಗಳಿಗೆ ಮಾತ್ರ ಕಾಲುವೆಗೆ ನೀರು ಹರಿಸಬಹುದು ಎಂದು ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಎಚ್. ಸುರೇಶ ಮಾಹಿತಿ ನೀಡಿದರು.

ಕಳೆದ ವರ್ಷಕ್ಕಿಂತ ಈ ವರ್ಷ ಸುಮಾರು 18 ಟಿಎಂಸಿ ಅಡಿ ನೀರಿನ ಕೊರತೆಯಿದೆ ಎಂದರು.

ಫೆ 15 ರವರೆಗೆ ಮಾತ್ರ ನೀರು:ಸದ್ಯ ಲಭ್ಯವಿರುವ ನೀರಿನ ಸಂಗ್ರಹದ ಪ್ರಕಾರ 14 ದಿನ ಚಾಲು, 8 ದಿನ ಬಂದ್ ವಾರಾಬಂಧಿ ಅಳವಡಿಸಿ ಡಿ.1 ರಿಂದ ಹಿಂಗಾರು ಹಂಗಾಮಿಗೆ ಕಾಲುವೆಗೆ ನೀರು ಹರಿಸಿದರೇ ಫೆ.15 ರವರೆಗೆ ಮಾತ್ರ ಕಾಲುವೆಗೆ ನೀರು ಹರಿಸಬಹುದು ಎಂದು ಅಧಿಕಾರಿಗಳು ತಿಳಿಸಿದರು.

ಲಘು ನೀರಾವರಿ ಬೆಳೆ ಬೆಳೆಯಲು ಮನವಿ:2021-22 ನೇ ಸಾಲಿಗೆ ಹಿಂಗಾರು ಹಂಗಾಮಿಗೆ ಕೇವಲ 70 ರಿಂದ 75 ದಿನಗಳೊಳಗೆ ಬರುವ ಲಘು ಬೆಳೆಗಳನ್ನು ಮಾತ್ರ ಬೆಳೆಯಬೇಕು. ಹೆಚ್ಚು ನೀರು ಬೇಡುವ ಭತ್ತ, ಕಬ್ಬು, ಬಾಳೆ ಬೆಳೆಯುವುದನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಆ ಬೆಳೆಗೆ ನೀರು ಪೂರೈಸಲು ಆಗುವುದಿಲ್ಲ, ಹೆಚ್ಚು ನೀರು ಬೇಡುವ ಬೆಳೆ ಬಿತ್ತನೆ ಮಾಡಿದರೆ ಅದಕ್ಕೆ ಕೆಬಿಜೆಎನ್ ಎಲ್ ಜವಾಬ್ದಾರಿಯಲ್ಲ ಎಂದು ಸೂಪರಿಂಟೆಂಡಿಂಗ್ ಎಂಜಿನಿಯರ್ ಡಿ.ಬಸವರಾಜು ತಿಳಿಸಿದ್ದಾರೆ.

ಐಸಿಸಿಗೆ ನೀತಿ ಸಂಹಿತೆ ಅಡ್ಡಿ

ಹಿಂಗಾರು ಹಂಗಾಮಿನ ಕಾಲುವೆಗೆ ನೀರು ಹರಿಸಲು ನಿರ್ಧರಿಸುವ ಮಹತ್ವದ ಐಸಿಸಿ ಸಭೆ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೆ, ಸಭೆ ನಡೆಸಲು ವಿಧಾನಪರಿಷತ್ ಚುನಾವಣೆಯ ನೀತಿ ಸಂಹಿತೆ ಅಡ್ಡವಾಗಿದ್ದು, ಚುನಾವಣಾ ಆಯೋಗದ ಅನುಮತಿ ಸಿಕ್ಕ ಕೂಡಲೇ ಐಸಿಸಿ ಸಭೆ ನಡೆಸಲಾಗುತ್ತದೆ. ಅದಕ್ಕೆ ಪೂರಕ ಪ್ರಯತ್ನಗಳು ಸಾಗಿವೆ ಎಂದು ಐಸಿಸಿ ಸದಸ್ಯ ಕಾರ್ಯದರ್ಶಿಯೂ ಆಗಿರುವ ಭೀಮರಾಯನಗುಡಿ ಮುಖ್ಯ ಎಂಜಿನಿಯರ್ ಪ್ರದೀಪಮಿತ್ರ ಮಂಜುನಾಥ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.