ADVERTISEMENT

ಇಂದಿನಿಂದ ರಜತ ಆಳ್ವಾಸ್‌ ವಿರಾಸತ್‌

ಖ್ಯಾತ ಕಲಾವಿದರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮದ ರಸದೌತಣ

​ಪ್ರಜಾವಾಣಿ ವಾರ್ತೆ
Published 3 ಜನವರಿ 2019, 19:13 IST
Last Updated 3 ಜನವರಿ 2019, 19:13 IST
ಆಳ್ವಾಸ್ ವಿರಾಸತ್‌ ನಡೆಯುವ ಮೂಡುಬಿದಿರೆಯ ವಿವೇಕಾನಂದನಗರದಲ್ಲಿ ಗಮನ ಸೆಳೆಯುತ್ತಿರುವ ವಿದ್ಯುತ್ ದೀಪಾಲಂಕಾರ.
ಆಳ್ವಾಸ್ ವಿರಾಸತ್‌ ನಡೆಯುವ ಮೂಡುಬಿದಿರೆಯ ವಿವೇಕಾನಂದನಗರದಲ್ಲಿ ಗಮನ ಸೆಳೆಯುತ್ತಿರುವ ವಿದ್ಯುತ್ ದೀಪಾಲಂಕಾರ.   

ಮಂಗಳೂರು: ಮೂಡುಬಿದಿರೆಯ ವಿವೇಕಾನಂದ ನಗರದಲ್ಲಿ 25ನೇ ವರ್ಷದ ಆಳ್ವಾಸ್‌ ವಿರಾಸತ್‌ಗೆ ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರದಿಂದ ಮೂರು ದಿನ ದೇಶದ ಖ್ಯಾತ ಸಂಗೀತ ಹಾಗೂ ನೃತ್ಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ಶುಕ್ರವಾರ ಸಂಜೆ 5.45ಕ್ಕೆ ವಿರಾಸತ್‌ ಉದ್ಘಾಟನೆ ನಡೆಯಲಿದ್ದು, ಖ್ಯಾತ ಗಾಯಕ ಹರಿಹರನ್‌ ಅವರಿಗೆ ವಿರಾಸತ್‌ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿರಾಸತ್‌ ರಜತ ಮಹೋತ್ಸವದ ಸಂದರ್ಭದಲ್ಲಿ ಅಂಚೆ ಇಲಾಖೆ ಹೊರತಂದಿರುವ ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗುವುದು ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

7 ರಿಂದ ರಾತ್ರಿ 9 ಗಂಟೆಯವರೆಗೆ ಹರಿಹರನ್‌ ಹಾಗೂ ಲೆಸ್ಲೆ ಲಿವಿಸ್‌ರಿಂದ ರಸ ಸಂಯೋಗ ನಡೆಯಲಿದ್ದು, ರಾತ್ರಿ 9.15 ರಿಂದ ಮೋಹಿನಿ ಅಟ್ಟಂ, ಬಡಗುತಿಟ್ಟು ಯಕ್ಷಗಾನ, ಸಾಹಸಮಯ ಮಲ್ಲಕಂಬ, ಗುಜರಾತಿನ ದಾಂಡಿಯ ನೃತ್ಯ ಪ್ರದರ್ಶನ ನಡೆಯಲಿವೆ.

ADVERTISEMENT

5ರಂದು ಸಂಜೆ 6 ರಿಂದ 8 ಗಂಟೆಯವರೆಗೆ ಸುಖ್ವಿಂದರ್ ಸಿಂಗ್‌ ಮತ್ತು ಬಳಗದಿಂದ ಗಾನ ತರಂಗ ನಡೆಯಲಿದ್ದು, ರಾತ್ರಿ 8.10 ರಿಂದ ಬೆಂಗಳೂರಿನ ನೃತ್ಯಾಂತರ ಅಕಾಡೆಮಿ ಆಫ್‌ ಪರ್‌ಫಾರ್ಮಿಂಗ್‌ ಆರ್ಟ್ಸ್‌ನ ಕಲಾವಿದರಿಂದ ಒಡಿಸ್ಸಿ ನೃತ್ಯ ಪ್ರದರ್ಶನಗೊಳ್ಳಲಿದೆ. ಆಂಧ್ರ ಪ್ರದೇಶದ ಬಂಜಾರ ನೃತ್ಯ, ಮಣಿಪುರದ ಸ್ಟಿಕ್‌ ಡ್ಯಾನ್ಸ್‌, ಶ್ರೀಲಂಕಾದ ಕ್ಯಾಂಡಿಯನ್‌ ನೃತ್ಯ, ಕಥಕ್‌ ನೃತ್ಯ ಪ್ರದರ್ಶನ ನಡೆಯಲಿವೆ.

6ರಂದು ಸಂಜೆ 5.45 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹೈದರಾಬಾದ್‌ನ ಸೂರ್ಯಪ್ರಕಾಶ್‌ ಅವರಿಗೆ ಆಳ್ವಾಸ್‌ ವರ್ಣ ವಿರಾಸತ್‌ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಸಂಜೆ 6 ರಿಂದ 8 ಗಂಟೆಯವರೆಗೆ ಶಂಕರ ಮಹಾದೇವನ್‌, ಸಿದ್ಧಾರ್ಥ ಮಹಾದೇವನ್‌, ಶಿವಂ ಮಹಾದೇವನ್‌ ಅವರು ಚಿತ್ರ ರಸಸಂಜೆ ಪ್ರಸ್ತುತಪಡಿಸುವರು. ರಾತ್ರಿ 9 ಗಂಟೆಯಿಂದ ಭರತನಾಟ್ಯ, ಮಣಿಪುರದ ಧೋಲ್‌ ಚಲಮ್‌, ಪಂಜಾಬಿನ ಬಾಂಗ್ಡಾ ನೃತ್ಯ, ತೆಂಕುತಿಟ್ಟು ಯಕ್ಷಗಾನ ಪ್ರದರ್ಶನಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.