ADVERTISEMENT

ಕಜ್ಜಿ, ತುರಿಕೆ: ಸುಸ್ತಾದ ವಿದ್ಯಾರ್ಥಿಗಳು

ಕೈಲಾಂಚ ಗ್ರಾಮದ ಅಂಬೇಡ್ಕರ್ ವಸತಿ ಶಾಲೆ: ಸ್ನಾನಕ್ಕೆ ಸಿಗುತ್ತಿಲ್ಲ ನೀರು

ಆರ್.ಜಿತೇಂದ್ರ
Published 27 ಆಗಸ್ಟ್ 2019, 19:43 IST
Last Updated 27 ಆಗಸ್ಟ್ 2019, 19:43 IST
ಶಾಲೆಯ ಮುಂಭಾಗ ಅಳಲು ತೋಡಿಕೊಂಡ ವಿದ್ಯಾರ್ಥಿಗಳು
ಶಾಲೆಯ ಮುಂಭಾಗ ಅಳಲು ತೋಡಿಕೊಂಡ ವಿದ್ಯಾರ್ಥಿಗಳು   

ರಾಮನಗರ: ತಾಲ್ಲೂಕಿನ ಕೈಲಾಂಚ ಗ್ರಾಮದಲ್ಲಿನ ಡಾ.ಬಿ.ಆರ್‌.ಅಂಬೇಡ್ಕರ್‌ ವಸತಿ ಶಾಲೆಯ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಜ್ಜಿ, ತುರಿಕೆಯಂತಹ ಚರ್ಮರೋಗದಿಂದ ಬಾಧೆ ಪಡುತ್ತಿದ್ದಾರೆ.

ವಸತಿ ನಿಲಯಕ್ಕೆ ಪ್ರತ್ಯೇಕ ನೀರಿನ ಸೌಲಭ್ಯ ಇಲ್ಲ. ಗ್ರಾಮ ಪಂಚಾಯಿತಿ ಎರಡು–ಮೂರು ದಿನಕ್ಕೊಮ್ಮೆ ಒಂದು ಗಂಟೆ ನೀರು ಪೂರೈಸುತ್ತದೆ. ಇದು ಅಡುಗೆ ಮತ್ತು ಮಕ್ಕಳ ನಿತ್ಯಕರ್ಮಕ್ಕೆ ಸಾಕಾಗುತ್ತಿದೆ. ವೈಯಕ್ತಿಕ ಸ್ವಚ್ಛತೆ ಕೊರತೆಯಿಂದ ಚರ್ಮರೋಗ ಉಲ್ಬಣಿಸಿದೆ.

ಐದಾರು ವಿದ್ಯಾರ್ಥಿಗಳಿಗೆ ಮೈಯೆಲ್ಲಕಜ್ಜಿ ಹಬ್ಬಿಕೊಂಡಿದೆ. ಹೊಟ್ಟೆ, ಗುಪ್ತಾಂಗ, ಪೃಷ್ಠದ ಹಿಂಭಾಗ ಚರ್ಮ ಕಿತ್ತು ರಕ್ತ ಸೋರುತ್ತಿದೆ. ಇನ್ನೂ ಹತ್ತಾರು ವಿದ್ಯಾರ್ಥಿಗಳಿಗೂ ಕಜ್ಜಿ ವ್ಯಾಪಿಸಿದೆ. ಇವರು ನಾಚಿಕೆಯಿಂದ ಪೋಷಕರು, ವೈದ್ಯರಲ್ಲೂ ಇದನ್ನು ಹೇಳಿಕೊಂಡಿಲ್ಲ. ಕ್ರಮೇಣ ಇತರ ವಿದ್ಯಾರ್ಥಿಗಳಿಗೂ ಚರ್ಮರೋಗ ಹಬ್ಬಿದೆ.

ADVERTISEMENT

ಕಿರಿದಾದ ಕಟ್ಟಡ: ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆದಿರುವ ವಸತಿ ಶಾಲೆಯಲ್ಲಿ ಪ.ಜಾತಿಯ 104 ಬಾಲಕರು, 28 ಬಾಲಕಿಯರು ಸೇರಿ ಒಟ್ಟು 132 ವಿದ್ಯಾರ್ಥಿಗಳು ಇಲ್ಲಿದ್ದಾರೆ.

ಆರರಿಂದ ಎಂಟನೇ ತರಗತಿಯ ವಿದ್ಯಾರ್ಥಿಗಳಾದ ಇವರನ್ನು ಎರಡು ಕಿರಿದಾದ ಕಟ್ಟಡಗಳಲ್ಲಿ ಇರಿಸಲಾಗಿದೆ. ಅಲ್ಲಿ ನಾಲ್ಕು ಕೊಠಡಿಗಳಷ್ಟೇ ಇವೆ. ಒಂದು ಕಟ್ಟಡದ ಎರಡು ಕೊಠಡಿಗಳು ಬಾಲಕಿಯರಿಗೆ. ಮತ್ತೊಂದು ಕಟ್ಟಡದಲ್ಲಿನ ಎರಡು ಕೊಠಡಿಗಳಲ್ಲಿ ನೂರು ಬಾಲಕರು ಇದ್ದಾರೆ.

ಮೂರು ಶೌಚಾಲಯ ಮತ್ತು ಸ್ನಾನದ ಗೃಹಗಳು ಇವೆ. ಒಂದು ಬಾಲಕಿಯರಿಗೆ ಮೀಸಲಿದ್ದು, ಸ್ವಚ್ಛತೆ ಇಲ್ಲ. ‘ನಳದಲ್ಲಿನ ನೀರು ಮುಖ ತೊಳೆಯಲು ಸಾಕಾಗುತ್ತದೆ ಅಷ್ಟೇ. ಕೆಲವೊಮ್ಮೆ ಬಟ್ಟೆ ಒಗೆಯಲೂ ನೀರು ಇರುವುದಿಲ್ಲ. ಊಟ–ತಿಂಡಿ ಚೆನ್ನಾಗಿಲ್ಲ’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡರು.

ಗ್ರಾಮಸ್ಥರಿಂದ ತರಾಟೆ
ವಿಷಯ ತಿಳಿದು ಸ್ಥಳೀಯರುಮಂಗಳವಾರ ವಿದ್ಯಾರ್ಥಿನಿಲಯಕ್ಕೆ ತೆರಳಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ನಂತರ ವೈದ್ಯರಿಂದ ಚಿಕಿತ್ಸೆಗೆ ಹಿರಿಯ ಅಧಿಕಾರಿಗಳು ವ್ಯವಸ್ಥೆ ಮಾಡಿದರು.

‘ಕಾಯಿಲೆ ಗುಣವಾಗುವವರೆಗೆ ಅವರ ಮನೆಗಳಿಗೇ ಕಳುಹಿಸಲು ತೀರ್ಮಾನಿಸಿದ್ದೇವೆ. ಈ ಬಗ್ಗೆ ಅವರ ಪೋಷಕರಿಗೆ ಮಾಹಿತಿ ನೀಡುತ್ತಿದ್ದೇವೆ’ ಎಂದು ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಚನ್ನಬಸಪ್ಪ ತಿಳಿಸಿದರು.

***

ವಸತಿ ಶಾಲೆಯಲ್ಲಿ ಕೊಳವೆಬಾವಿ ಇಲ್ಲದೆ ನೀರಿನ ಕೊರತೆ ಇದೆ. ಮಕ್ಕಳು ಶುಚಿತ್ವ ಕಾಪಾಡಿಕೊಳ್ಳಲು ಆಗಿಲ್ಲ. ಸದ್ಯದಲ್ಲೇ ಶಾಲೆಯನ್ನು ಬೇರೆಡೆಗೆ ಸ್ಥಳಾಂತರಿಸುತ್ತೇವೆ.
-ಚನ್ನಬಸಪ್ಪ,ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ, ರಾಮನಗರ

*
ಕೇವಲ ಭಾನುವಾರ ಮಾತ್ರ ಸ್ನಾನ ಮಾಡುತ್ತೇವೆ. ಉಳಿದ ದಿನ ಸ್ನಾನಕ್ಕೆ, ಬಟ್ಟೆ ಒಗೆಯಲೂ ನೀರು ಸಿಗುವುದಿಲ್ಲ. ಶಾಲೆಯಲ್ಲಿನ 60 ಮಂದಿಗೆ ಕಜ್ಜಿ ಆಗಿದೆ.
-ನೊಂದ ವಿದ್ಯಾರ್ಥಿಗಳು,ಅಂಬೇಡ್ಕರ್‌ ವಸತಿ ಶಾಲೆ, ಕೈಲಾಂಚ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.