ADVERTISEMENT

ರಾರಾಜಿಸಿದ ಅಂಬೇಡ್ಕರ್ ಭಾವಚಿತ್ರ | ಶಾ ಹೇಳಿಕೆ: ವಿಧಾನಸಭೆಯಲ್ಲಿ ಭಾರಿ ಕೋಲಾಹಲ

* ನಾಲ್ಕು ತಾಸು ನಡೆಯದ ಕಲಾಪ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2024, 15:48 IST
Last Updated 19 ಡಿಸೆಂಬರ್ 2024, 15:48 IST
<div class="paragraphs"><p> ವಿಧಾನಸಭೆ</p></div>

ವಿಧಾನಸಭೆ

   

ಸುವರ್ಣ ವಿಧಾನಸೌಧ (ಬೆಳಗಾವಿ): ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಡಾ.ಬಿ.ಆರ್. ಅಂಬೇಡ್ಕರ್‌ ಕುರಿತು ನೀಡಿದ ಹೇಳಿಕೆ ವಿಧಾನಮಂಡಲದ ಉಭಯ ಸದನಗಳಲ್ಲಿ ಭಾರಿ ಕೋಲಾಹಲಕ್ಕೆ ಕಾರಣವಾಯಿತು. ಕಾಂಗ್ರೆಸ್‌ನ ಎಲ್ಲ ಸದಸ್ಯರು ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು, ಪ್ರತಿಭಟನೆ ನಡೆಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರು ಅಂಬೇಡ್ಕರ್‌ ಭಾವಚಿತ್ರದ ಜತೆಗೆ, ಕಾಂಗ್ರೆಸ್ ಅವರಗೆ ಅನ್ಯಾಯ ಮಾಡಿದೆ ಎಂದು ಬರೆದಿದ್ದ ಫಲಕಗಳನ್ನು ಪ್ರದರ್ಶಿಸಿದರು.

ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಅವರು ಬಾಣಂತಿಯರ ಸಾವಿನ ಪ್ರಕರಣದ ಕುರಿತು ಉತ್ತರ ನೀಡಿದ ಬಳಿಕ ಕಾಂಗ್ರೆಸ್‌ ಸದಸ್ಯರು ಈ ವಿಷಯ ಪ್ರಸ್ತಾಪಿಸಿದರು. ಇದು ಉಭಯ ಪಕ್ಷಗಳ ಸದಸ್ಯರ ಮಧ್ಯೆ ಜಟಾಪಟಿಗೆ ಕಾರಣವಾಯಿತು. ಬೆಳಿಗ್ಗೆ ಹತ್ತು ನಿಮಿಷ ಕಲಾಪ ಮುಂದೂಡಲಾಯಿತು. ಭೋಜನ ವಿರಾಮಕ್ಕೂ ಮುನ್ನ ಮತ್ತು ಆ ಬಳಿಕವೂ ಕಲಾಪ ಮುಂದೂಡಲಾಯಿತು.

ADVERTISEMENT

ಈ ವೇಳೆ, ಸಿದ್ದರಾಮಯ್ಯ ಸೇರಿ ಎಲ್ಲ ಸಚಿವರು ಹಾಗೂ ಸದಸ್ಯರ ಆಸನದ ಎದುರಿನ ಮೇಜಿನ ಮೇಲೆ ಅಂಬೇಡ್ಕರ್ ಅವರ ಭಾವಚಿತ್ರವನ್ನು ಸಾಲಾಗಿ ಜೋಡಿಸಿಡಲಾಗಿತ್ತು. ಬಿಜೆಪಿ ಸದಸ್ಯರು ಅಂಬೇಡ್ಕರ್ ಭಾವಚಿತ್ರ ಹಾಗೂ ಫಲಕಗಳನ್ನು ಇರಿಸಿಕೊಂಡಿದ್ದರು. ಕಲಾಪ ಮುಂದೂಡಿದ ಅವಧಿಯಲ್ಲಿ ಆಡಳಿತ ಪಕ್ಷದ ಪ್ರತಿ ಸದಸ್ಯನ ಜಾಗದಲ್ಲಿ ಅಂಬೇಡ್ಕರ್ ಕುಳಿತಂತೆ ಭಾಸವಾಗುತ್ತಿತ್ತು. 

ಮತ್ತೆ ಕಲಾಪ ಆರಂಭವಾದಾಗ, ಪರಸ್ಪರ ಆರೋಪ –ಪ್ರತ್ಯಾರೋಪ, ಧಿಕ್ಕಾರದ ಘೋಷಣೆಗಳು ತಾರಕಕ್ಕೇರಿದವು. ಬಿಜೆಪಿಯ ಸದಸ್ಯರು ಈ ಮಧ್ಯೆ ತಮ್ಮ ಕೈಗೆ ಸಿಕ್ಕಿದ ಕಾಗದಗಳನ್ನು ಚೂರು ಮಾಡಿ ಮೇಲಕ್ಕೆ ತೂರಿದರು. ಕಾಂಗ್ರೆಸ್ ಸದಸ್ಯರಲ್ಲದೇ ಹಲವು ಸಚಿವರೂ ಫಲಕಗಳನ್ನು ಹಿಡಿದಿದ್ದರು.

ಅಮಿತ್‌ ಶಾ ಅವರನ್ನು ವಜಾ ಮಾಡಬೇಕು ಎಂಬ ಫಲಕಗಳನ್ನು ಕಾಂಗ್ರೆಸ್ ಸದಸ್ಯರು ಹಿಡಿದಿದ್ದರು. ಇದಕ್ಕೆ ಪ್ರತಿಯಾಗಿ ಅಂಬೇಡ್ಕರ್‌ ಅವರನ್ನು ಚುನಾವಣೆಯಲ್ಲಿ ಸೋಲಿಸಿದ ಮತ್ತು  ಮೃತಪಟ್ಟಾಗ ಸಮಾಧಿ ಮಾಡಲು ಜಾಗ ನೀಡದ ಕಾಂಗ್ರೆಸ್‌ಗೆ ಧಿಕ್ಕಾರ ಎಂಬ ಫಲಕಗಳನ್ನು ಹಿಡಿದಿದ್ದರು. 

ಆರ್‌ಎಸ್‌ಎಸ್‌ ಮತ್ತು ಬಿಜೆಪಿಯ ಮನಃಸ್ಥಿತಿ ಬಯಲಾಗಿದೆ. ಇವರು ಅಂಬೇಡ್ಕರ್‌ ವಿರೋಧಿಗಳು ಮತ್ತು ಸಂವಿಧಾನ ವಿರೋಧಿಗಳು ಎಂದು ಕಾಂಗ್ರೆಸ್ ಸದಸ್ಯರು ಟೀಕಾ ಪ್ರಹಾರ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.