ಬೆಂಗಳೂರು: ‘ಬೆಳಗಾವಿಯ ಸುವರ್ಣಸೌಧದ ಆವರಣದಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಪ್ರತಿಮೆಯನ್ನು ಸ್ಥಾಪಿಸಲು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ ಹೇಳಿದರು.
ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ತಿಪ್ಪಣ್ಣಪ್ಪ ಕಮಕನೂರ ಅವರ ಪ್ರಶ್ನೆಗೆ ಉತ್ತರಿಸಿ ಸಚಿವರು, ‘ನಗರದ ಚಾಲುಕ್ಯ ವೃತ್ತದಲ್ಲಿರುವ ಬಸವೇಶ್ವರರ ಪ್ರತಿಮೆ ಪಕ್ಕದಲ್ಲಿ ಪ್ರತಿಮೆ ಸ್ಥಾಪಿಸಲು ಒತ್ತಾಯಿಸಿದ್ದಾರೆ. ಇದೂ ಸೇರಿದಂತೆ ಬಿಬಿಎಂಪಿ ವ್ಯಾಪ್ತಿಯ ಇತರೆ ಪ್ರದೇಶಗಳಲ್ಲಿ ಪ್ರತಿಮೆ ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶದಂತೆ ಅವಕಾಶ ಇಲ್ಲ’ ಎಂದರು.
‘160ಕ್ಕಿಂತ ಹೆಚ್ಚು ಶಿವಶರಣರು ಜನಸಾಮಾನ್ಯರ ಭಾಷೆಯಲ್ಲಿ ವಚನಗಳನ್ನು ರಚಿಸಿ, ಸಮಾಜದ ಅಂಕು–ಡೊಂಕುಗಳನ್ನು ತಿದ್ದಿ, ಸುಧಾರಣೆಗೆ ಶ್ರಮಿಸಿರುತ್ತಾರೆ. ಹಲವು ಶಿವಶರಣರ ಪ್ರತಿಮೆ ಸ್ಥಾಪಿಸುವುದು ಕಷ್ಟ. ಆದ್ದರಿಂದ ಮಹಾನ್ ಚೇತನ ಶಿವಶರಣರ ಹೆಸರನ್ನು ಒಂದೇ ಶಿಲೆಯಲ್ಲಿ ಕೆತ್ತಿಸಿ ಶಿಲಾಶಾಸನ ಮಾದರಿಯಲ್ಲಿ ಸ್ಥಾಪಿಸುವ ಕುರಿತು ಪರಿಶೀಲಿಸಲಾಗುವುದು’ ಎಂದು ಹೇಳಿದರು.
‘ಬಸವಣ್ಣನವರ ಕಾಲದ ಅಂಬಿಗರ ಚೌಡಯ್ಯ ಅವರು ಅವರಷ್ಟೇ ಪ್ರಸಿದ್ಧರು. ಅವರ ಪ್ರತಿಮೆಯನ್ನು ವಿಧಾನಸೌಧ ಆವರಣ ಅಥವಾ ಬೆಳಗಾವಿಯ ಸುವರ್ಣ ವಿಧಾನಸೌಧದ ಆವರಣದಲ್ಲಾದರೂ ಸ್ಥಾಪಿಸಲೇಬೇಕು’ ಎಂದು ತಿಪ್ಪಣ್ಣಪ್ಪ ಒತ್ತಾಯಿಸಿದರು. ವಿರೋಧ ಪಕ್ಷದ ಮುಖ್ಯಸಚೇತಕ ರವಿಕುಮಾರ್ ಇದಕ್ಕೆ ದನಿಗೂಡಿಸಿದರು. ‘ನಾಲ್ಕನೇ ಬಾರಿಗೆ ತಿಪ್ಪಣ್ಣಪ್ಪ ಅವರು ಪ್ರತಿಮೆ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಸುವರ್ಣ ವಿಧಾನಸೌಧದ ಆವರಣದಲ್ಲಿ ಪ್ರತಿಮೆ ಸ್ಥಾಪಿಸಲು ಚರ್ಚಿಸಿ ಶೀಘ್ರ ಕ್ರಮ ಕೈಗೊಳ್ಳಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.