ADVERTISEMENT

ಸಂಪುಟ ವಿಸ್ತರಣೆ ಇನ್ನೂ ಅನಿಶ್ಚಿತ

ಶಾ ಜೊತೆ ನಡೆಯದ ಚರ್ಚೆ| ಶುಕ್ರವಾರ ಮತ್ತೆ ಸಮಾಲೋಚನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 20:00 IST
Last Updated 30 ಜನವರಿ 2020, 20:00 IST
   

ನವದೆಹಲಿ: ಸಚಿವ ಸಂಪುಟ ವಿಸ್ತರಣೆ ನಿಟ್ಟಿನಲ್ಲಿ ಹೈಕಮಾಂಡ್‌ ಅನುಮೋದನೆ ಬಯಸಿ ಗುರುವಾರ ದೆಹಲಿಗೆ ಬಂದಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ನಿರೀಕ್ಷಿತ ಭರವಸೆ ದೊರೆತಿಲ್ಲ.

ದೆಹಲಿ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಪಾಲ್ಗೊಂಡು ವಾಪಸ್ಸಾದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹಾಗೂ ಕೇಂದ್ರದ ಗೃಹ ಸಚಿವ ಅಮಿತ್‌ ಶಾ ಅವರನ್ನು ರಾತ್ರಿ ಭೇಟಿ ಮಾಡಿದರೂ ಯಾವುದೇ ಫಲ ದೊರೆಯಲಿಲ್ಲ.

ಇದರಿಂದಾಗಿ ಶುಕ್ರವಾರವೇ ಸಂಪುಟ ವಿಸ್ತರಣೆಗೆ ಮುಹೂರ್ತ ಕೂಡಿಬರಲಿದೆ ಎಂಬ ನಿರೀಕ್ಷೆಯೂ ಹುಸಿಯಾದಂತಾಗಿದೆ.

ADVERTISEMENT

ಯಡಿಯೂರಪ್ಪ ಅವರು ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ಬರುವಾಗ ಹಿಂದಿ ಭಾಷೆ ಬಲ್ಲವರಾದ ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಜಗದೀಶ ಶೆಟ್ಟರ್‌ ಅವರೊಂದಿಗೆ ಬರುವ ಪರಿಪಾಠ ಇಟ್ಟುಕೊಂಡಿದ್ದರು. ಆದರೆ, ಇದೇ ಮೊದಲ ಬಾರಿಗೆ ಯಡಿಯೂರಪ್ಪ ಅವರು ಪುತ್ರರಾದ ವಿಜಯೇಂದ್ರ ಮತ್ತು ರಾಘವೇಂದ್ರ ಅವರೊಂದಿಗೆ ನಡ್ಡಾ ಅವರನ್ನು ಭೇಟಿ ಮಾಡಿ 3 ನಿಮಿಷ ಕಾಲ ಮಾತುಕತೆ ನಡೆಸಿದರಾದರೂ ಯಾವುದೇ ರೀತಿಯ ಚರ್ಚೆಗೆ ಅವಕಾಶ ದೊರೆಯಲಿಲ್ಲ.

ರಾತ್ರಿ 10ಕ್ಕೆ ವಿಜಯೇಂದ್ರ ಜೊತೆ ಅಮಿತ್‌ ಶಾ ನಿವಾಸಕ್ಕೆ ತೆರಳಿ ಐದೇ ನಿಮಿಷದಲ್ಲಿ ಹೊರಬಂದ ಅವರು, ‘ಇಬ್ಬರೂ ಮುಖಂಡರೊಂದಿಗೆ ಚರ್ಚೆ ನಡೆಸಲಾಗಿದೆ. ಶುಕ್ರವಾರ ಮಧ್ಯಾಹ್ನ ಮತ್ತೊಮ್ಮೆ ಸಭೆ ನಡೆಸಿ ಚರ್ಚಿಸಿದ ನಂತರವೇ ಬೆಂಗಳೂರಿಗೆ ಮರಳುವೆ’ ಎಂದು ವಿವರಿಸಿದರು.

‘ಸಂಪುಟ ವಿಸ್ತರಿಸಬೇಕೋ ಅಥವಾ ಪುನರ್‌ ರಚಿಸಬೇಕೋ ಎಂಬುದನ್ನು ನಡ್ಡಾ ಮತ್ತು ಶಾ ಜೊತೆ ಚರ್ಚಿಸಿದ ಬಳಿಕವೇ ನಿರ್ಧರಿಸಲಾಗುವುದು’ ಎಂದು ಮಧ್ಯಾಹ್ನ ತಿಳಿಸಿದ್ದ ಯಡಿಯೂರಪ್ಪ, ವರಿಷ್ಠರ ಭೇಟಿಯ ವೇಳೆ ಈ ಸಂಬಂಧ ಒಪ್ಪಿಗೆ ದೊರೆಯುವ ವಿಶ್ವಾಸ ವ್ಯಕ್ತಪಡಿಸಿದ್ದರು.

ಶುಕ್ರವಾರ ಶಾ ಅವರ ಸಮ್ಮತಿ ದೊರೆತಲ್ಲಿ ಭಾನುವಾರ ಸಂಪುಟ ವಿಸ್ತರಣೆಗೆ ಕಾಲ ಕೂಡಿಬರಲಿದೆ. ಇಲ್ಲದಿದ್ದರೆ ಮತ್ತೆ ನನೆಗುದಿಗೆ ಬೀಳಲಿದೆ ಎಂದು ಪಕ್ಷದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.