ಬೆಂಗಳೂರು: ‘ಅನ್ನ, ಅಕ್ಷರ, ಆರೋಗ್ಯ, ಆಶ್ರಯ, ಅರಣ್ಯ, ಆರಕ್ಷಣ, ಅಧ್ಯಾತ್ಮ, ಅನುಕಂಪ, ಅನುಬಂಧ ಎಂಬ ಒಂಬತ್ತು ಅಂಶಗಳಿಗೆ ಒತ್ತು ನೀಡಿ ಜನಸಾಮಾನ್ಯರಿಗೆ ಆದಿಚುಂಚನಗಿರಿ ಮಠ ಸೇವೆ ನೀಡುತ್ತಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯ ನಗರೂರಿನಲ್ಲಿ ಆರಂಭಿಸಿರುವ ‘ಬಿಜಿಎಸ್ ಎಂಸಿಎಚ್’ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಸೇವೆ, ಶಿಕ್ಷಣ ಮತ್ತು ಸಮರ್ಪಣೆಯ ಮೂಲಕ ಭಾರತದ ಅಧ್ಯಾತ್ಮ ಪರಂಪರೆಯನ್ನು ಆದಿಚುಂಚನಗಿರಿ ಮಠ ಎತ್ತಿ ಹಿಡಿದಿದೆ. ಬಹುಜನ ಹಿತಾಯ, ಬಹುಜನ ಸುಖಾಯ ಎಂದು ಕೆಲಸ ಮಾಡುವುದೇ ನಮ್ಮ ಸಂಸ್ಕೃತಿಯ ಮೂಲ. ಬಡವರು ಮತ್ತು ಮಧ್ಯಮವರ್ಗಕ್ಕೆ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆಯನ್ನು ನೀಡುತ್ತಿದೆ. ಅಧ್ಯಾತ್ಮ ಮತ್ತು ಕರ್ಮಯೋಗದ ಮೂಲಕ ಒಗ್ಗಟ್ಟು ಮೂಡಿಸುತ್ತಿದೆ ಎಂದು ಹೇಳಿದರು.
ರೋಗ ಬರುವುದು ಸಹಜ. ಭಾರತೀಯರಿಗೆ ಆರೋಗ್ಯ ವೆಚ್ಚವನ್ನು ಭರಿಸುವುದೇ ದೊಡ್ಡ ಸಮಸ್ಯೆಯಾಗಿತ್ತು. ಆಯುಷ್ಮಾನ್ ಭಾರತ್ ಮೂಲಕ ₹ 5 ಲಕ್ಷದವರೆಗೆ ಜನರು ಉಚಿತವಾಗಿ ಆರೋಗ್ಯ ಸೇವೆ ಪಡೆಯಲು ಕೇಂದ್ರ ಸರ್ಕಾರ ಯೋಜನೆ ರೂಪಿಸಿತ್ತು. 60 ಕೋಟಿ ಜನರು ಇದರ ಫಲಾನುಭವಿಗಳಾಗಿದ್ದಾರೆ ಎಂದು ತಿಳಿಸಿದರು.
ಮಿಷನ್ ಇಂದ್ರಧನುಷ್, ಪೋಷಣ್ ಅಭಿಯಾನ ಇನ್ನಿತರ ಯೋಜನೆಗಳ ಮೂಲಕ ಮಕ್ಕಳು ಮತ್ತು ತಾಯಂದಿರ ಆರೋಗ್ಯ ಕಾಪಾಡಲು ಬೇಕಾದ ಲಸಿಕೆ, ಪೌಷ್ಟಿಕಾಂಶ ನೀಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕಡಿಮೆ ಬೆಲೆಯಲ್ಲಿ ಔಷಧ ಪಡೆಯಲು ಪ್ರಧಾನಮಂತ್ರಿ ಜನೌಷಧ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ವಿವರಿಸಿದರು.
ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕುಲಾಧಿಪತಿ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಇದು ಕೇವಲ ಕಟ್ಟಡ ಕಟ್ಟುವ ಕೆಲಸವಲ್ಲ. ಮನಸ್ಸುಗಳನ್ನು ಬೆಸೆಯುವ, ವಿದ್ಯೆ ಮತ್ತು ಆರೋಗ್ಯವನ್ನು ನೀಡುವ ಮಹತ್ಕಾರ್ಯ’ ಎಂದು ಬಣ್ಣಿಸಿದರು.
ರಾಜಕೋಟ್ ಅರ್ಶ ವಿದ್ಯಾಮಂದಿರದ ಪರಮಾತ್ಮಾನಂದ ಸ್ವಾಮೀಜಿ, ಮಾದಾರ ಚನ್ನಯ್ಯ ಸ್ವಾಮೀಜಿ, ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಪಾಟೀಲ ಮಾತನಾಡಿದರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ, ಸಂಸದ ಡಾ. ಕೆ. ಸುಧಾಕರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ, ಶಾಸಕರಾದ ಎಸ್.ಆರ್. ವಿಶ್ವನಾಥ್, ಎನ್. ಶ್ರೀನಿವಾಸಯ್ಯ ಉಪಸ್ಥಿತರಿದ್ದರು.
ಕ್ಷಮೆ ಕೇಳಿದ ಅಮಿತ್ ಶಾ
‘ಮಹಾನ್ ಭಾಷೆ ಕನ್ನಡದಲ್ಲಿ ಮಾತನಾಡಲು ನನಗೆ ಆಗದೇ ಇರುವುದಕ್ಕೆ ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಷಣದ ಆರಂಭದಲ್ಲೇ ತಿಳಿಸಿದರು. ಆಗ ಜನರು ಚಪ್ಪಾಳೆತಟ್ಟಿ ಸ್ವಾಗತಿಸಿದರು. ಅಮಿತ್ ಶಾ ಮಾತುಗಳನ್ನು ಕಾರ್ಯಕ್ರಮ ನಿರೂಪಕರು ಕನ್ನಡಕ್ಕೆ ಅನುವಾದಿಸಿದರು.
ಒಳಮೀಸಲಾತಿ ಪ್ರಸ್ತಾಪ
‘ಒಳಮೀಸಲಾತಿಗಾಗಿ ಮಾದಿಗ ಸಮಾಜ 30 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಗಮನಕ್ಕೆ ತಂದಾಗ ಅವರು ಬೆಂಬಲ ನೀಡಿದ್ದರು. ಈಗ ರಾಜ್ಯದಲ್ಲಿ ಒಳಮೀಸಲಾತಿ ಜಾರಿ ಮುಂದಕ್ಕೆ ಹೋಗುತ್ತಿದೆ. ಈ ಬಗ್ಗೆ ಅಮಿತ್ ಶಾ ಅವರಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದೇನೆ. ಶೋಷಿತ ಸಮುದಾಯಗಳೊಂದಿಗೆ ಇದ್ದೇನೆ ಎಂದು ಅವರು ಭರವಸೆ ನೀಡಿದ್ದಾರೆ’ ಎಂದು ಮಾದಾರ ಚೆನ್ನಯ್ಯ ಸ್ವಾಮೀಜಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.