ADVERTISEMENT

ಅಮೃತ್‌ 2.0 ಯೋಜನೆಗೆ ಆರಂಭದಲ್ಲೇ ಕಂಟಕ: ಶೇ 83ಕ್ಕಿಂತ ಹೆಚ್ಚು ವೆಚ್ಚಕ್ಕೆ ತಯಾರಿ?

ಅಮೃತ್‌ 2.0: ಕೇಂದ್ರ ನಿಗದಿ ₹9,230 ಕೋಟಿ: ರಾಜ್ಯದ ಲೆಕ್ಕ ₹16,900 ಕೋಟಿ!

Published 12 ಸೆಪ್ಟೆಂಬರ್ 2022, 19:31 IST
Last Updated 12 ಸೆಪ್ಟೆಂಬರ್ 2022, 19:31 IST
ಅಮೃತ್‌ 2.0 ಲೊಗೊ
ಅಮೃತ್‌ 2.0 ಲೊಗೊ   

ಬೆಂಗಳೂರು: ರಾಜ್ಯದಲ್ಲಿ ಒಂದು ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯಿರುವ 247 ಪಟ್ಟಣಗಳಲ್ಲಿ ಪ್ರತಿಮನೆಗೂ ನಲ್ಲಿ ನೀರು ಒದಗಿಸುವ ಕೇಂದ್ರ ಸರ್ಕಾರದ ‘ಅಮೃತ್‌ 2.0’ ಯೋಜನೆಗೆ ಆರಂಭದಲ್ಲೇ ಕಂಟಕ ಎದುರಾಗಿದೆ. ಕೇಂದ್ರ ಸರ್ಕಾರ ನಿಗದಿಪಡಿಸಿರುವ ವೆಚ್ಚಕ್ಕಿಂತ ಅಧಿಕಾರಿಗಳು ಶೇ 83ಕ್ಕೂ ಹೆಚ್ಚು ವೆಚ್ಚದ ಅಂದಾಜು ಪಟ್ಟಿಯನ್ನು ಸಲ್ಲಿಸಿರುವುದೇ ಇದಕ್ಕೆ ಕಾರಣ.

ಪ್ರಧಾನಿ ನರೇಂದ್ರ ಮೋದಿ ಅವರು ಅಮೃತ್ 2.0 ಯೋಜನೆಯನ್ನು 2021ರ ಅಕ್ಟೋಬರ್‌ 2ರಂದು ಪ್ರಕಟಿಸಿದ್ದರು. ಈ ಯೋಜನೆ ಆರಂಭಕ್ಕೆ ಸೂಚನೆ ನೀಡಿ ಕೇಂದ್ರ ಸರ್ಕಾರ ಮೇ 17ರಂದು ಆದೇಶವನ್ನೂ ಹೊರಡಿಸಿದೆ. ಈ ಯೋಜನೆ ಅನುಷ್ಠಾನ ಮಾಡಲು ಸಂಸ್ಥೆಯನ್ನು (ಪಿಡಿಎಂಸಿ) ರಚಿಸಬೇಕಿದೆ. ಇದಕ್ಕೆ ಕೇಂದ್ರ ನಿಗದಿಪಡಿಸಿರುವ ಹಣಕ್ಕಿಂತ ₹38 ಕೋಟಿ ಹೆಚ್ಚು ಅಂದಾಜುಪಟ್ಟಿ ಸಲ್ಲಿಸಲಾಗಿದೆ. ಮುಖ್ಯ ಕಾರ್ಯದರ್ಶಿ ನೇತೃತ್ವದ ರಾಜ್ಯಮಟ್ಟದ ಉನ್ನತ ಸಮಿತಿ ಸಭೆಯಲ್ಲಿ ಈ ಅಂದಾಜು ಪಟ್ಟಿಗೆ ಸಮ್ಮತಿ ನೀಡಬೇಕಿತ್ತು. ಇದ್ಯಾವುದಕ್ಕೂ ಒಪ್ಪದ ಮುಖ್ಯ ಕಾರ್ಯದರ್ಶಿಯವರು, ಕೇಂದ್ರ ನಿಗದಿ ಮಾಡಿರುವ ಹಣಕ್ಕೇ ಅಂದಾಜುಪಟ್ಟಿ, ಕ್ರಿಯಾಯೋಜನೆ ಮತ್ತೆ ಸಲ್ಲಿಸಿ ಎಂದು ಹೇಳಿ ಸಭೆಯನ್ನು ಮುಂದೂಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಪೌರಾಡಳಿತ ನಿರ್ದೇಶನಾಲಯ ಅಮೃತ್‌ 2.0 ಯೋಜನೆಯನ್ನು ನಿರ್ವಹಣೆ ಮಾಡಬೇಕಿದೆ.

ADVERTISEMENT

ಈ ಯೋಜನೆಯಲ್ಲಿ ಕುಡಿಯುವ ನೀರು, ಜಲಮೂಲಗಳ ಪುನರುಜ್ಜೀವನ, ಹಸಿರು ಪ್ರದೇಶ– ಪಾರ್ಕ್‌ ಎಂದು ಮೂರು ವರ್ಗಗಳನ್ನು ಮಾಡಿ, ಹಣ ನಿಗದಿ ಮಾಡಲಾಗಿದೆ. ಕೇಂದ್ರ ಶೇ 50ರಷ್ಟು, ರಾಜ್ಯ ಶೇ 40 ಹಾಗೂ ಸ್ಥಳೀಯ ಸಂಸ್ಥೆಗಳು ಶೇ 10ರಷ್ಟು ವೆಚ್ಚ ಮಾಡಬೇಕಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರತಿಮನೆಗೂ ನಲ್ಲಿ ನೀರು ಪೂರೈಸುವ ಯೋಜನೆಯನ್ನು →ನಿರ್ವಹಿಸಲಿದೆ. ಇದಕ್ಕಾಗಿ ಮಂಡಳಿ ಸಲ್ಲಿಸಿರುವ ಅಂದಾಜು ಪಟ್ಟಿ ಕೇಂದ್ರ ನಿಗದಿ ಮಾಡಿರುವ ಹಣಕ್ಕಿಂತ ₹5,393.28 ಕೋಟಿ ಹೆಚ್ಚಾಗಿದೆ. ಇನ್ನು ಸ್ಥಳೀಯ ಸಂಸ್ಥೆಗಳು ಜಲಮೂಲಗಳ ಪುನರುಜ್ಜೀವನಕ್ಕೆ ಮೂರುಪಟ್ಟು ಹೆಚ್ಚು ಹಾಗೂ ಹಸಿರು ಪ್ರದೇಶ– ಪಾರ್ಕ್‌ಅಭಿವೃದ್ಧಿಪಡಿಸಲು ಎಂಟುಪಟ್ಟು ಹೆಚ್ಚು ವೆಚ್ಚದ ಅಂದಾಜು ಪಟ್ಟಿ ನೀಡಿವೆ.

‘ಅಮೃತ್‌ 2.0 ಯೋಜನೆ 2021–22ರಿಂದ ನಾಲ್ಕು ವರ್ಷದಲ್ಲಿ ಅನುಷ್ಠಾನವಾಗಬೇಕಿದೆ. ದೇಶದ ಇತರೆ ರಾಜ್ಯಗಳು ಕ್ರಿಯಾಯೋಜನೆಗಳನ್ನು ಸಲ್ಲಿಸಿ, ಸಮ್ಮತಿ ಪಡೆದು ಯೋಜನೆ ಆರಂಭಿಸಿವೆ. ಆದರೆ ನಮ್ಮ ರಾಜ್ಯ ಕ್ರಿಯಾಯೋಜನೆಯನ್ನೇ ಸಲ್ಲಿಸದೆ ವಿಳಂಬ ಮಾಡುತ್ತಿದೆ. ಕ್ರಿಯಾಯೋಜನೆ ಕೊಡಿ ಎಂದು ಕೇಂದ್ರ ಕೇಳುತ್ತಿದೆ. ನಮ್ಮಲ್ಲಿ ಅದು ಸಿದ್ಧವಾಗಿಲ್ಲ’ ಎಂದು ಹಿರಿಯ ಅಧಿಕಾರಿ ಹೇಳಿದರು.

ಹೆಚ್ಚು ಮಾಡಬಾರದು ಎಂದೇನೂ ಇಲ್ಲ...

‘ಮುಖ್ಯ ಕಾರ್ಯದರ್ಶಿ ಅವರು ನೀಡಿರುವ ಸೂಚನೆಯಂತೆ ನಾವು ಕ್ರಮ ಕೈಗೊಳ್ಳುತ್ತಿದ್ದೇವೆ. ನಗರ ನೀರು ಸಂಪರ್ಕ ಕ್ರಿಯಾಯೋಜನೆಯನ್ನು ಸಿದ್ಧಪಡಿಸುತ್ತಿದ್ದೇವೆ. ಕೇಂದ್ರ ಸರ್ಕಾರ ನಿಗದಿಪಡಿಸಿದ್ದಕ್ಕಿಂತ ಅಂದಾಜುಪಟ್ಟಿ ಹೆಚ್ಚು ಮಾಡಬಾರದೆಂದೇನೂ ಇಲ್ಲ. ಹೆಚ್ಚಾದರೆ ರಾಜ್ಯ ಸರ್ಕಾರ ಕೊಡುತ್ತದೆ. ಇಲ್ಲದಿದ್ದರೆ ಯೋಜನೆವೆಚ್ಚ ಕಡಿಮೆ ಮಾಡಿಕೊಳ್ಳಬೇಕು’ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಕೆ.ಪಿ. ಮೋಹನ್‌ ರಾಜ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.