ADVERTISEMENT

‘ಕರ್ತವ್ಯ ನಿಭಾಯಿಸಲು ಸುಳ್ಳು ಹೇಳಿದ ಅನಂತ್‌’

ತೇಜಸ್ವಿನಿ ಅವರಿಂದ ಪತಿಯ ಸ್ಮರಣೆ

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2018, 20:41 IST
Last Updated 29 ನವೆಂಬರ್ 2018, 20:41 IST
‘ಅನಂತ ನಮನ’ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅರುಣ್‌ ಜೇಟ್ಲಿ, ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ಮಾದಾರ ಚೆನ್ನಯ್ಯ ಸ್ವಾಮೀಜಿ, ರಾಜ್ಯಪಾಲ ವಜುಭಾಯಿ ವಾಲಾ ನಮನ ಸಲ್ಲಿಸಿದರು – ಪ್ರಜಾವಾಣಿ ಚಿತ್ರ
‘ಅನಂತ ನಮನ’ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅರುಣ್‌ ಜೇಟ್ಲಿ, ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ, ಮಾದಾರ ಚೆನ್ನಯ್ಯ ಸ್ವಾಮೀಜಿ, ರಾಜ್ಯಪಾಲ ವಜುಭಾಯಿ ವಾಲಾ ನಮನ ಸಲ್ಲಿಸಿದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಎಂದೂ ಸುಳ್ಳುಗಳನ್ನು ಹೇಳದ ಅನಂತ್‌ ತಮ್ಮ ಜೀವನದ ಕೊನೆ ನಾಲ್ಕು ತಿಂಗಳು ಸುಳ್ಳು ಹೇಳುತ್ತಾ ಬಂದರು. ಕರ್ತವ್ಯ ನಿಭಾಯಿಸುವ ಸಲುವಾಗಿ ಆರೋಗ್ಯದಿಂದ ಇದ್ದೇನೆ ಎಂದು ಸುಳ್ಳು ಹೇಳುತ್ತಿದ್ದರು’ ಎಂದು ತೇಜಸ್ವಿನಿ ಅನಂತಕುಮಾರ್‌ ಹೇಳಿದರು.

ನಗರದ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಗುರುವಾರ ಏರ್ಪಡಿಸಿದ್ದ ‘ಅನಂತ ನಮನ’ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಪತಿ ಅನಂತಕುಮಾರ್ ಅವರ ಕೊನೆಯ ದಿನಗಳನ್ನು ನೆನಪಿಸಿಕೊಂಡರು.

‘ಕಳೆದ ಮೇ ಕೊನೆಯಲ್ಲೇ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದರೂ ವಿಧಾನಸಭಾ ಚುನಾವಣೆ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಪ್ರತಿ ದಿನ ಬೆಳಿಗ್ಗೆ 6 ಕ್ಕೆ ಹೋಗಿ ರಾತ್ರಿ 12 ಕ್ಕೆ ಮನೆಗೆ ಬರುತ್ತಿದ್ದರು. ಚುನಾವಣೆ ಮುಗಿದ ಮೇಲೆ ದೆಹಲಿಯಲ್ಲಿ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಂಡರು. ಬೆಂಗಳೂರು ಅಪೊಲೋ ಆಸ್ಪತ್ರೆಯಲ್ಲಿ ಇನ್ನೊಮ್ಮೆ ಪರೀಕ್ಷೆ ಮಾಡಿಸಿಕೊಂಡಾಗ ಕ್ಯಾನ್ಸರ್‌ ಖಚಿತವಾಯಿತು. ಆಗ ಅವರು ವೈದ್ಯರ ಬಳಿ ಕೇಳಿದ್ದು ಇಷ್ಟೇ, ಎಷ್ಟು ಸಮಯ ಉಳಿದಿದೆ, ಏನೇನು ಕೆಲಸಗಳನ್ನು ಮಾಡಬಹುದು ಎಂದು. ಬಳಿಕ ಎರಡು ಗಂಟೆ ಮೌನವಾಗಿದ್ದರು. ನಂತರ ಅವರ ತಮ್ಮ ಮತ್ತು ನನ್ನ ಬಳಿ ವಿಷಯ’ ತಿಳಿಸಿದರು.

ADVERTISEMENT

ಆ ಬಳಿಕ ಅವರು ವಿಧಾನಸಭೆ ಉಪಚುನಾವಣೆ, ಸಂಸತ್ತಿನ ಕಲಾಪ, ಮೋದಿ ಸರ್ಕಾರದ ವಿರುದ್ಧದ ಅವಿಶ್ವಾಸ ಗೊತ್ತುವಳಿ ಕಲಾಪದಲ್ಲಿ ಸಕ್ರಿಯವಾಗಿ ತೊಡಿಸಿಕೊಂಡರು. ಅಮೆರಿಕದಲ್ಲಿ ಆಸ್ಪತ್ರೆಯಲ್ಲಿ ಹೆಚ್ಚು ಸಮಯ ಇರಲು ಬಯಸದೇ ಬೆಂಗಳೂರಿಗೆ ವಾಪಸ್‌ ಬರಲು ಒತ್ತಾಯ ಮಾಡಿದ್ದರು ಎಂದು ತೇಜಸ್ವಿನಿ ನೆನಪಿಸಿಕೊಂಡರು.

ಸುಮಧುರ ಸಂಬಂಧ: ವಿರೋಧ ಪಕ್ಷಗಳ ಜತೆ ಉತ್ತಮ ಸಂಬಂಧ ಹೊಂದಿದ್ದಅನಂತಕುಮಾರ್‌ ಸಂಸತ್ತಿನಲ್ಲಿ ವಿರೋಧ ಪಕ್ಷಗಳ ಸದಸ್ಯರು ಎಷ್ಟೇ ಅಸಮಾಧಾನ ಹೊಂದಿದ್ದರೂ, ಅವರನ್ನು ಸಮಾಧಾನಗೊಳಿಸಿ ಕಲಾಪದಲ್ಲಿ ಪಾಲ್ಗೊಳ್ಳುವಂತೆ ಮಾಡುತ್ತಿದ್ದರು. ಇದಕ್ಕೆ ಅನಂತ ಅವರ ಸ್ನೇಹಮಯ ವ್ಯಕ್ತಿತ್ವವೇ ಕಾರಣ ಎಂದು ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ನೆನಪಿಸಿಕೊಂಡರು.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ‘ರಾಜ್ಯದಲ್ಲಿ ಬಿಜೆಪಿ ಈ ಮಟ್ಟಕ್ಕೆ ತಲುಪಲು ಅನಂತಕುಮಾರ್‌ ಅವರ ಪಾತ್ರ ಪ್ರಮುಖವಾದುದು. ಪಕ್ಷದ ಸಂಘಟನೆ ಇನ್ನಷ್ಟು ಬಲಪಡಿಸುವುದೇ ನಾವು ಅನಂತ್‌ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ’ ಎಂದರು.

ರಾಜ್ಯಪಾಲ ವಜುಭಾಯಿ ವಾಲಾ, ಪೇಜಾವರ ವಿಶ್ವೇಶ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಮಾದಾರ ಚೆನ್ನಯ್ಯ, ಉತ್ತರಾಖಂಡ್‌ ಮುಖ್ಯಮಂತ್ರಿ ಟಿ.ಎಸ್‌.ರಾವತ್, ಆರ್‌ಎಸ್ಎಸ್‌ ಸಹ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರೂ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.