ADVERTISEMENT

ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ ಬಡ್ತಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2018, 19:46 IST
Last Updated 19 ಅಕ್ಟೋಬರ್ 2018, 19:46 IST

ಬೆಂಗಳೂರು: ಮಿನಿ ಅಂಗನವಾಡಿಗಳ ಕಾರ್ಯಕರ್ತೆಯರಿಗೆ ಬಡ್ತಿ ನೀಡಲು ಸರ್ಕಾರ ನಿರ್ಧರಿಸಿದೆ.

ಮುಖ್ಯ ಅಂಗನವಾಡಿಗಳಲ್ಲಿ ಖಾಲಿ ಇರುವ ಕಾರ್ಯಕರ್ತೆಯರ ಹುದ್ದೆಗಳಿಗೆ ಮಾತ್ರ ಮೊದಲ ಹಂತದಲ್ಲಿ ಬಡ್ತಿ ಸಿಗಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲ ಅವರು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್‌ (ಎಐಟಿಯುಸಿ) ಪದಾಧಿಕಾರಿಗಳೊಂದಿಗೆ ಇತ್ತೀಚೆಗೆ ನಡೆಸಿದ ಸಭೆಯಲ್ಲಿ ಈ ಕುರಿತು ತೀರ್ಮಾನ ಮಾಡಲಾಗಿದೆ.

ADVERTISEMENT

ಅಂಗನವಾಡಿ ಕಟ್ಟಡಕ್ಕಾಗಿ ನೀಡುತ್ತಿದ್ದ ಬಾಡಿಗೆ ಮೊತ್ತವನ್ನೂ ಹೆಚ್ಚಿಸಲಾಗಿದೆ. ₹700 ಇದ್ದ ಬಾಡಿಗೆಯನ್ನು ₹ 1 ಸಾವಿರಕ್ಕೆ, ₹ 3 ಸಾವಿರದಿಂದ ₹ 4 ಸಾವಿರಕ್ಕೆ, ₹ 5 ಸಾವಿರದಿಂದ ₹ 6 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಸಭೆಯಲ್ಲಿ ಮಾತನಾಡಿದ ಪದಾಧಿಕಾರಿಗಳು, ‘ಆರೋಗ್ಯ ಇಲಾಖೆಯ ಕುಷ್ಠರೋಗಿಗಳ ಪತ್ತೆ ಆಂದೋಲನದಲ್ಲಿ ನಮ್ಮ ಕಾರ್ಯಕರ್ತೆಯರು ಭಾಗವಹಿಸುವುದಿಲ್ಲ’ ಎಂದು ಒಕ್ಕೊರಲಿನಿಂದ ಹೇಳಿದರು. ಇದಕ್ಕೆ ಒಪ್ಪಿದ ಸಚಿವೆ, ‘ಕಾರ್ಯಕರ್ತೆಯರು ಭಾಗವಹಿಸಬೇಕಿಲ್ಲ. ಈ ಬಗ್ಗೆ ಸಂಬಂಧಪಟ್ಟವರಿಗೆ ಮಾಹಿತಿ ನೀಡುತ್ತೇನೆ’ ಎಂದು ಭರವಸೆ ನೀಡಿದರು.

‘ಸಂಬಳ ವಿಳಂಬವನ್ನು ಸದ್ಯದಲ್ಲಿಯೇ ಬಗೆಹರಿಸುತ್ತೇವೆ. ಈಗಾಗಲೇ ಹಣ ಬಿಡುಗಡೆಯಾಗಿದೆ. ಸಹಾಯಕಿಯರು ಹೆರಿಗೆ ರಜೆಗೆ ಹೋದಾಗ ಅವರ ಜಾಗಕ್ಕೆ ನಿವೃತ್ತಿಯಾಗಿರುವ ಕಾರ್ಯಕರ್ತೆಯರನ್ನು ತಾತ್ಕಾಲಿಕವಾಗಿ ನಿಯೋಜನೆ ಮಾಡಲಾಗುತ್ತದೆ’ ಎಂದು ಜಯಮಾಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.