ADVERTISEMENT

ಅಂಗನವಾಡಿ ಕಾರ್ಯರ್ತೆಯರ ಪ್ರತಿಭಟನೆ ಹಿಂದಕ್ಕೆ

ಬೇಡಿಕೆ ಈಡೇರದಿದ್ದರೆ ಮತ್ತೆ ಹೋರಾಟದ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 20:15 IST
Last Updated 11 ಡಿಸೆಂಬರ್ 2019, 20:15 IST
ಬೀದಿ ಬದಿಯಲ್ಲಿ ಆಹಾರ ತಯಾರಿಸಿಕೊಳ್ಳುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು.
ಬೀದಿ ಬದಿಯಲ್ಲಿ ಆಹಾರ ತಯಾರಿಸಿಕೊಳ್ಳುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು.   

ತುಮಕೂರು: ಅಂಗನವಾಡಿ ಕೇಂದ್ರಗಳಲ್ಲೇ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭಿಸಬೇಕು ಎಂದು ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ.

ಸರ್ಕಾರಿ ಶಾಲೆಗಳಲ್ಲಿ ಎಲ್‌.ಕೆ.ಜಿ ಹಾಗೂ ಯು.ಕೆ.ಜಿ ತರಗತಿಗಳನ್ನು ಪ್ರಾರಂಭಿಸುವ ಕುರಿತು ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದ ಸಾಧಕ ಬಾಧಕಗಳ ಕುರಿತು ಚರ್ಚಿಸಲು ಡಿ.16 ರಂದು ಬೆಳಿಗ್ಗೆ 11ಕ್ಕೆ ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಸಭೆ ಕರೆದಿರುವ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಬುಧವಾರ ಸೂಚನಾ ಪತ್ರ ತಲುಪಿಸಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಕೈ ಬಿಡಲಾಗಿದೆ.

ಮತ್ತೆ ಹೋರಾಟದ ಎಚ್ಚರಿಕೆ: ಸರ್ಕಾರದ ಮಾತನ್ನು ಗೌರವಿಸಿ ತಾತ್ಕಾಲಿಕವಾಗಿ ಹೋರಾಟ ಹಿಂಪಡೆದಿದ್ದೇವೆ. ಅಕಸ್ಮಾತ್ಡಿ.16ರಂದು ನಮ್ಮ ಬೇಡಿಕೆ ಈಡೇರದಿದ್ದರೆ ಡಿ.17ರಿಂದ ನಮ್ಮ ಹೋರಾಟ ಇನ್ನೊಂದು ಸ್ವರೂಪ ಪಡೆದುಕೊಳ್ಳಲಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮೀ ಎಚ್ಚರಿಸಿದರು.

ADVERTISEMENT

ಬತ್ತದ ಉತ್ಸಾಹ: ತುಮಕೂರಿನಿಂದ ಬೆಂಗಳೂರಿಗೆ ಪಾದಯಾತ್ರೆಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಪ್ರತಿಭಟನಕಾರರು ತುಮಕೂರಿನ ಗಾಜಿನಮನೆ ಆವರಣದಲ್ಲಿ ಚಳಿ, ಬಿಸಿಲು, ಹಗಲು, ರಾತ್ರಿ ಲೆಕ್ಕಿಸದೆ ಕೇಂದ್ರ, ರಾಜ್ಯ ಸರ್ಕಾರದ ಮತ್ತು ಪೊಲೀಸ್ ಇಲಾಖೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಎತ್ತ ಕಣ್ಣಾಯಿಸಿದರೂ ಕೆಂಪು ಸೀರೆ, ಬಾವುಟ ಹಿಡಿದ ಅಂಗನವಾಡಿ ಕಾರ್ಯಕರ್ತೆಯರ ದಂಡು ಕಾಣುತ್ತಿತ್ತು.

ನರಕಯಾತನೆ: ಶತಾಯಗತಾಯವಾಗಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲೇ ಬೇಕು ಎಂದು ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತೆಯರು ಸೌಲಭ್ಯಗಳ ಕೊರತೆ ನಡುವೆಯೂ ಎಲ್ಲಿಯೂ ಕದಲದೆ ಕುಳಿತಿದ್ದರು. ಬೆಳಿಗ್ಗೆ ಸ್ನಾನ, ಶೌಚ, ನೀರಿಗಾಗಿ ಪರದಾಡಿದರು. ಕೆಲವರು ಊಟ, ಉಪಹಾರ ಸಿಗದೇ ನರಕಯಾತನೆ ಅನುಭವಿಸಿದರು.

ಹಸಿವು ನೀಗಿಸಿದ ಮಠ: ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಾವಿರಾರು ಕಾರ್ಯಕರ್ತೆಯರ ಹಸಿವನ್ನುಸಿದ್ಧಗಂಗಾ ಮಠ ನೀಗಿಸಿತು. ನೂರಾರು ಕಾರ್ಯಕರ್ತೆಯರು ಮಂಗಳವಾರ ರಾತ್ರಿ ಮಠದ ಆವರಣದಲ್ಲಿಯೇ ತಂಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.