ADVERTISEMENT

ಅನಿಮೇಟೆಡ್‌ ವಿಡಿಯೊ ಪ್ರಕರಣ: ನಡ್ಡಾ–ಮಾಳವೀಯ ವಿರುದ್ಧದ ಪ್ರಕರಣ ರದ್ದು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2024, 14:48 IST
Last Updated 13 ಡಿಸೆಂಬರ್ 2024, 14:48 IST
ಜೆ.ಪಿ. ನಡ್ಡಾ
ಜೆ.ಪಿ. ನಡ್ಡಾ   

ಬೆಂಗಳೂರು: ಬಿಜೆಪಿಯ ಅಧಿಕೃತ ಸಾಮಾಜಿಕ ಖಾತೆಯಲ್ಲಿ ಪ್ರಸಾರ ಮಾಡಲಾಗಿದ್ದ ಅನಿಮೇಟೆಡ್‌ ವಿಡಿಯೊವೊಂದನ್ನು ಆಕ್ಷೇಪಿಸಿ ಕೇಂದ್ರ ಸಚಿವ ಜೆ.ಪಿ.ನಡ್ಡಾ ಮತ್ತು ಬಿಜೆಪಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ಅಮಿತ್‌ ಮಾಳವಿಯಾ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್‌ ಪ್ರಕರಣವನ್ನು ಹೈಕೋರ್ಟ್‌ ರದ್ದುಪಡಿಸಿದೆ.

ಈ ಸಂಬಂಧ ಜೆ.ಪಿ. ನಡ್ಡಾ ಮತ್ತು ಅಮಿತ್‌ ಮಾಳವಿಯಾ ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ’ಯ ವಿಶೇಷ ನ್ಯಾಯಪೀಠದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಪುರಸ್ಕರಿಸಿದ್ದಾರೆ.

ನಡ್ಡಾ ಮತ್ತು ಮಾಳವೀಯ ಪರ ಹೈಕೋರ್ಟ್‌ ವಕೀಲ ಬಿ.ವಿನೋದ್ ಕುಮಾರ್ ಮತ್ತು ಪ್ರಾಸಿಕ್ಯೂಷನ್‌ ಪರ ರಾಜ್ಯದ ಹೆಚ್ಚುವರಿ ಪ್ರಾಸಿಕ್ಯೂಟರ್‌ ಬಿ.ಎನ್.ಜಗದೀಶ್‌ ವಾದ ಮಂಡಿಸಿದ್ದರು.

ADVERTISEMENT

ಪ್ರಕರಣವೇನು?: ‘ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬಿತ್ತರಿಸಲಾಗಿದ್ದ ವಿಡಿಯೊದಲ್ಲಿ; ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಸ್ಲಿಮೇತರರ ಆಸ್ತಿಯನ್ನು ಕಿತ್ತು, ಮುಸ್ಲಿಂ ಸಮುದಾಯಕ್ಕೆ ನೀಡುತ್ತದೆ ಎಂಬ ಆಕ್ಷೇಪಾರ್ಹ ಸಂದೇಶ ಪ್ರಸಾರ ಮಾಡಲಾಗಿದೆ’ ಎಂದು ಆರೋಪಿಸಿ ಜೇವರ್ಗಿಯ ಪ್ರವೀಣ ಕುಮಾರ್‌ ಪಾಟೀಲ್‌ ಕಲಬುರಗಿ ಸೈಬರ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದರನ್ವಯ ಪೊಲೀಸರು ನಡ್ಡಾ ಮತ್ತು ಮಾಳವಿಯಾ ವಿರುದ್ಧ, ಪ್ರಜಾಪ್ರತಿನಿಧಿ ಕಾಯ್ದೆ–1951ರ ಕಲಂ 125, ಮಾಹಿತಿ ತಂತ್ರಜ್ಞಾನ ಕಾಯ್ದೆ–2000ರ ಕಲಂ 66(ಡಿ), ಭಾರತೀಯ ದಂಡ ಸಂಹಿತೆ–1860ರ ಕಲಂ 53ಎ, 504, 171ಎಫ್‌, 171ಜಿ, 505(2), 171ಸಿ ಅಡಿಯಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದರು.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.