ADVERTISEMENT

ಅಂಜನಾದ್ರಿ ದೇಗುಲದ ಪೂಜಾ ವಿವಾದ: ಹೈಕೋರ್ಟ್‌ ಆದೇಶ ಪಾಲನೆಗೆ ಸುಪ್ರೀಂ ನಿರ್ದೇಶನ

ಅಂಜನಾದ್ರಿ ಹನುಮಂತ ದೇವಸ್ಥಾನದ ಪೂಜಾ ವಿವಾದ

​ಪ್ರಜಾವಾಣಿ ವಾರ್ತೆ
Published 27 ಮೇ 2025, 15:55 IST
Last Updated 27 ಮೇ 2025, 15:55 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ಪ್ರಜಾವಾಣಿ ವಾರ್ತೆ

ನವದೆಹಲಿ: ಕೊಪ್ಪಳದ ಅಂಜನಾದ್ರಿ ಬೆಟ್ಟದ ಆಂಜನೇಯ ದೇವಸ್ಥಾನವನ್ನು ಸ್ವಾಧೀನಪಡಿಸಿಕೊಳ್ಳುವುದರ ವಿರುದ್ಧ ವಿದ್ಯಾದಾಸ್ ಬಾಬಾಜಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ನೀಡಿದ್ದ ಮಧ್ಯಂತರ ಆದೇಶವನ್ನು ನಿಷ್ಠೆಯಿಂದ ಪಾಲಿಸುವಂತೆ ಕರ್ನಾಟಕ ಸರ್ಕಾರದ ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ ನಿರ್ದೇಶನ ನೀಡಿದೆ.

ADVERTISEMENT

ಅರ್ಜಿದಾರರ ಪರವಾಗಿ ವಕೀಲ ವಿಷ್ಣು ಶಂಕರ್ ಜೈನ್ ವಾದವನ್ನು ಆಲಿಸಿದ ನಂತರ ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ದೀಪಂಕರ್ ದತ್ತ ಅವರ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು.

ಅರ್ಜಿದಾರರು ದೇವಾಲಯದ ಅರ್ಚಕರಾಗಿ ಮುಂದುವರಿಸಲು ಹಾಗೂ ಅವರಿಗೆ ಈ ಹಿಂದೆ ಒದಗಿಸಲಾದ ಎಲ್ಲ ಮೂಲಸೌಕರ್ಯಗಳೊಂದಿಗೆ ಒಂದೇ ಕೋಣೆಯಲ್ಲಿ ಉಳಿಯಲು ಪೀಠ ಅವಕಾಶ ನೀಡಿತು.

ಆದೇಶ ಪಾಲನೆಯಲ್ಲಿ ಯಾವುದೇ ಉಲ್ಲಂಘನೆಯಾದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಪೀಠವು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿತು. 

ರಾಜ್ಯ ಸರ್ಕಾರದ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್‌ನ ಏಪ್ರಿಲ್‌ 9ರ ಆದೇಶವನ್ನು ಪ್ರಶ್ನಿಸಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 

‘ಅರ್ಜಿದಾರರು ರಾಮನಂದಿ ಸಂಪ್ರದಾಯದವರಾಗಿದ್ದು, ದೇವಾಲಯದಲ್ಲಿ ಪ್ರಧಾನ ಅರ್ಚಕರಾಗಿದ್ದರು. ಅವರ ಸಂಪ್ರದಾಯದವರು 120 ವರ್ಷಗಳಿಂದ ದೇವಸ್ಥಾನದ ಪೂಜೆ ಮಾಡುತ್ತಿದ್ದರು. ಆದರೆ, 2018 ರಲ್ಲಿ ಇದ್ದಕ್ಕಿದ್ದಂತೆ, ಕರ್ನಾಟಕ ಧಾರ್ಮಿಕ ದತ್ತಿ ಕಾಯ್ದೆಯ ನಿಯಮಗಳನ್ನು ಉಲ್ಲಂಘಿಸಿ ಈ ದೇವಾಲಯವನ್ನು ಸಂಪೂರ್ಣವಾಗಿ ಸ್ವಾಧೀನಪಡಿಸಿಕೊಳ್ಳಲಾಗಿತ್ತು’ ಎಂದು ಜೈನ್ ವಾದಿಸಿದರು. 

‘ಅರ್ಜಿದಾರರು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಸಲ್ಲಿಸಿರುವ ಹೇಳಿಕೆಗಳನ್ನು ನಾವು ನೋಡಿದ್ದೇವೆ. ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಬೇಕು. ಜತೆಗೆ, ಹೈಕೋರ್ಟ್‌ 2023ರ ಫೆಬ್ರವರಿ 14ರಂದು ನೀಡಿದ ಮಧ್ಯಂತರ ಆದೇಶವನ್ನು ನಿಷ್ಠೆಯಿಂದ ಪಾಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ’ ಎಂದು ಪೀಠ ಹೇಳಿದೆ.

ಕೊಪ್ಪಳ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ 2025ರ ಮಾರ್ಚ್ 16ರಂದು ದೇವಸ್ಥಾನಕ್ಕೆ ಭೇಟಿ ನೀಡಿ ಕಾನೂನುಬಾಹಿರವಾಗಿ ಮತ್ತೊಬ್ಬರನ್ನು ಅರ್ಚಕರನ್ನಾಗಿ ನೇಮಿಸಿದರು. ಅರ್ಜಿದಾರರ ಸೇವೆಗೆ ಅಡ್ಡಿಪಡಿಸಿ ಬೆದರಿಕೆ ಹಾಕಿದರು’ ಎಂದು ಅರ್ಜಿಯಲ್ಲಿ ದೂರಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.