ADVERTISEMENT

ಬೆಳಗಾವಿಗೆ ಇನ್ನೊಂದು ಸಚಿವ ಸ್ಥಾನ: ಹೈಕಮಾಂಡ್‌ಗೆ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 18:34 IST
Last Updated 19 ಜೂನ್ 2018, 18:34 IST
 ರಮೇಶ ಜಾರಕಿಹೊಳಿ
ರಮೇಶ ಜಾರಕಿಹೊಳಿ   

ಬೆಳಗಾವಿ: ಬೆಳಗಾವಿ ಜಿಲ್ಲೆಗೆ ಇನ್ನೊಂದು ಸಚಿವ ಸ್ಥಾನ ನೀಡುವಂತೆ ಹೈಕಮಾಂಡ್‌ಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ನಗರದಲ್ಲಿ ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಯಾರಿಗೆ ಕೊಡಬೇಕು ಎನ್ನುವುದನ್ನು ವರಿಷ್ಠರು ತೀರ್ಮಾನಿಸುತ್ತಾರೆ. ಕಳೆದ ಬಾರಿಯ ಚುನಾವಣೆಯಲ್ಲಿ 6 ಸ್ಥಾನಗಳನ್ನು ಗೆದ್ದಿದ್ದೆವು. ಈ ಬಾರಿ 8 ಸ್ಥಾನ ಗೆದ್ದಿದ್ದೇವೆ. ಹೀಗಾಗಿ, ಹೆಚ್ಚಿನ ಆದ್ಯತೆ ಕೊಡುವಂತೆ ಕೋರಿದ್ದೇವೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಕಾಂಗ್ರೆಸ್‌ ಪಕ್ಷವು, ಕನಿಷ್ಠ 10 ಕ್ಷೇತ್ರಗಳಲ್ಲಿ ಗೆಲ್ಲದಿದ್ದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಹೇಳಿದ್ದು ನಿಜ. ಇದರೊಂದಿಗೆ, ನಾನು ಕೇಳಿದವರಿಗೆ ಟಿಕೆಟ್‌ ಕೊಡಬೇಕು ಎನ್ನುವ ಬೇಡಿಕೆಯನ್ನೂ ಇಟ್ಟಿದ್ದೆ. ಆದರೆ, ಕೆಲವು ಕಡೆ ಅದು ಸಾಧ್ಯವಾಗಲಿಲ್ಲ’ ಎಂದು ಅವರು ತಿಳಿಸಿದರು.

ADVERTISEMENT

‘ಅಥಣಿ ಹಾಗೂ ಕಾಗವಾಡ ಕ್ಷೇತ್ರಗಳನ್ನು ಸವಾಲಾಗಿ ಸ್ವೀಕರಿಸಿದ್ದೆ. ಅಲ್ಲಿ ಗೆಲುವು ಸಾಧಿಸಿದ್ದು ಹೆಚ್ಚಿನ ಖುಷಿ ತಂದಿದೆ. ಇದರಿಂದಾಗಿಯೇ ನನಗೆ ಸಚಿವ ಸ್ಥಾನ ದೊರೆತಿದೆ. ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಕೊಟ್ಟ ಮಾತು ಉಳಿಸಿಕೊಂಡರು’ ಎಂದ ಅವರು, ಯಾವ ಖಾತೆ ಸಿಕ್ಕಿದೆ ಎನ್ನುವುದು ಮುಖ್ಯವಲ್ಲ; ಚೆನ್ನಾಗಿ ಕಾರ್ಯನಿರ್ವಹಿಸುವುದು ಮುಖ್ಯ ಎಂದರು.

*‘ಸತೀಶ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವಂತೆ ಬೆಂಬಲಿಗರು ಪ್ರತಿಭಟನೆ ನಡೆಸುತ್ತಿದ್ದಾರೆ. ಕೇಳುವುದು, ಪ್ರತಿಭಟಿಸುವುದು ಅವರ ಹಕ್ಕು. ಹಿಂದಿನ ಸರ್ಕಾರದಲ್ಲಿ ಸತೀಶ ಸಚಿವನಾಗಿದ್ದಾಗ ನಾನು ಸುಮ್ಮನಿರಲಿಲ್ಲವೇ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.