ADVERTISEMENT

ಡ್ರಗ್ಸ್‌ ಜಾಗೃತಿ ಪ್ರಚಾರಕ್ಕೆ ರಾಜೀವ್‌ ವಿ.ವಿ ಪತ್ರ

​ಪ್ರಜಾವಾಣಿ ವಾರ್ತೆ
Published 9 ಜನವರಿ 2026, 16:17 IST
Last Updated 9 ಜನವರಿ 2026, 16:17 IST
ಡಾ. ಬಿ.ಸಿ.ಭಗವಾನ್
ಡಾ. ಬಿ.ಸಿ.ಭಗವಾನ್   

ಬೆಂಗಳೂರು: ಚಿತ್ರಮಂದಿರ, ಮಲ್ಟಿಫ್ಲೆಕ್ಸ್‌ಗಳಲ್ಲಿ ಚಲನಚಿತ್ರ ಪ್ರದರ್ಶನದ ವೇಳೆ ಮಾದಕ ದ್ರವ್ಯಗಳ ಅಪಾಯ ಕುರಿತು ಜಾಗೃತಿ ಮೂಡಿಸುವ ಜಾಹೀರಾತುಗಳ ಪ್ರಸಾರ ಕಡ್ಡಾಯಗೊಳಿಸುವಂತೆ ಕೋರಿ ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ಪತ್ರ ಬರೆಯಲು ನಿರ್ಧರಿಸಿದೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಸಿ.ಭಗವಾನ್‌, ‘ಕರ್ನಾಟಕವನ್ನು ಮಾದಕ ದ್ರವ್ಯ ಮುಕ್ತ ರಾಜ್ಯವನ್ನಾಗಿ ಮಾಡಲು ವಿಶ್ವವಿದ್ಯಾಲಯ ಯೋಜನೆ ರೂಪಿಸಿದೆ. ಮಾದಕ ದ್ರವ್ಯಗಳ ದುಷ್ಪರಿಣಾಮಗಳ ಬಗ್ಗೆ ಯುವಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಸ್ತುತ ಚಿತ್ರ ಪ್ರದರ್ಶನದ ವೇಳೆ ತಂಬಾಕು ಬಳಕೆಯ ಅಪಾಯ ಕುರಿತು ಜಾಹೀರಾತುಗಳು ಪ್ರಸಾರವಾಗುತ್ತಿವೆ. ಅದೇ ರೀತಿ ಮಾದಕ ದ್ರವ್ಯಗಳ ವಿರುದ್ಧ ಜಾಗೃತಿ ಮೂಡಿಸುವ ಜಾಹೀರಾತು, ವಿಡಿಯೊ ಪ್ರಸಾರವಾಗಬೇಕಿದೆ ಎಂದರು.

‘ಸಾರಿಗೆ ಬಸ್‌ಗಳು, ಮೆಟ್ರೊ ರೈಲುಗಳು, ಪ್ರಮುಖ ನಿಲ್ದಾಣಗಳಲ್ಲಿ ಜಾಗೃತಿ ಸಂದೇಶಗಳನ್ನು ಹಾಕಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡಲಾಗಿದೆ. ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು  ಸ್ಪಂದಿಸಿದ್ದಾರೆ. ಶೀಘ್ರ ಅಂತಿಮ ಪ್ರಸ್ತಾವನೆ ಸಲ್ಲಿಸಲಾಗುವುದು. ವೈದ್ಯಕೀಯ ಮತ್ತು ನರ್ಸಿಂಗ್‌ ಕಾಲೇಜುಗಳ ಕ್ಯಾಂಪಸ್‌ಗಳಲ್ಲಿ ಮಾದಕ ದ್ರವ್ಯಗಳ ಬಳಕೆಯನ್ನು ತಡೆಯಲು ಪೊಲೀಸ್ ಅಧಿಕಾರಿಗಳು, ಅಧ್ಯಾಪಕರು ಹಾಗೂ ವಿದ್ಯಾರ್ಥಿ ಪ್ರತಿನಿಧಿಗಳನ್ನು ಒಳಗೊಂಡ ವಿಶೇಷ ಕಾರ್ಯಪಡೆ (ಟಾಸ್ಕ್ ಫೋರ್ಸ್) ರಚಿಸಲಾಗಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ವರದಿಯನ್ನು ಸಲ್ಲಿಕೆ, ಕಾಲೇಜುಗಳು ಸಂಯೋಜನೆ ಪಡೆಯಲು ಮಾದಕ ದ್ರವ್ಯ ಮುಕ್ತ ಎಂಬ ಘೋಷಣೆ ಕಡ್ಡಾಯಗೊಳಿಸಲಾಗಿದೆ’ ಎಂದರು.

ADVERTISEMENT

ವಿಶ್ವವಿದ್ಯಾಲಯದ ಎಲ್ಲ ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲು ನಶೆಮುಕ್ತ ಕರ್ನಾಟಕ ಅಭಿಯಾನ ಆರಂಭಿಸಲಾಗಿದೆ. ವಿದ್ಯಾರ್ಥಿಗಳೇ ತಯಾರಿಸಿದ ಜಾಗೃತಿ ವಿಡಿಯೊಗಳು, ಮಾಹಿತಿಯನ್ನು ಕಾಲೇಜಿನಲ್ಲಿ ತರಗತಿಗಳು ಆರಂಭವಾಗುವ ಮೊದಲು ವಾರಕ್ಕೆ ಕನಿಷ್ಠ ಎರಡು ಬಾರಿ ಪ್ರದರ್ಶಿಸುವಂತೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

ರಾಮನಗರಕ್ಕೆ ಕ್ಯಾಂಪಸ್‌: ಮಾರ್ಚ್‌ಗೆ ಸ್ಥಳಾಂತರ ರಾಮನಗರಕ್ಕೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕ್ಯಾಂಪಸ್‌ ಸ್ಥಳಾಂತರ ಪ್ರಕ್ರಿಯೆ ಇದೇ ಮಾರ್ಚ್‌ನಿಂದ ಆರಂಭವಾಗಲಿದೆ. ಹಂತಹಂತವಾಗಿ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು ಎಂದು ಕುಲಪತಿ ಭಗವಾನ್‌ ಹೇಳಿದರು.  ‘ಸಿಬ್ಬಂದಿ ವಸತಿ ನಿರ್ಮಾಣ ಕಾರ್ಯ ಬಾಕಿ ಇದೆ. ಮೊದಲ ಹಂತದಲ್ಲಿ ಆಡಳಿತ ವಿಭಾಗವನ್ನು  ಸ್ಥಳಾಂತರಿಸಲಾಗುತ್ತದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷಾ ವಿಭಾಗ ಬೆಂಗಳೂರಿನಲ್ಲೇ ಇರಲಿದೆ’ ಎಂದು ಮಾಹಿತಿ ನೀಡಿದರು. ‘₹600 ಕೋಟಿ ನೀಡುವಂತೆ ಸರ್ಕಾರ ಕೇಳಿತ್ತು. ₹300 ಕೋಟಿ ವರ್ಗಾಯಿಸಲಾಗಿದೆ. ನಿವೃತ್ತರ ಪಿಂಚಣಿ ಮತ್ತಿತರ ವೆಚ್ಚಗಳಿಗಾಗಿ ₹300 ಕೋಟಿಯನ್ನು ಪ್ರತ್ಯೇಕವಾಗಿ ಮೀಸಲಿಡಲಾಗಿದೆ’ ಎಂದು ವಿಶ್ವವಿದ್ಯಾಲಯದ ಆಡಳಿತಾಧಿಕಾರಿ ಅರ್ಜುನ್‌ ಒಡೆಯರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.