ಬೆಂಗಳೂರು: ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಕ್ಸಲ್ ನಿಗ್ರಹ ಪಡೆಯನ್ನು ಇನ್ನೂ ಮೂರು ವರ್ಷ ಮುಂದುವರೆಸುವುದಾಗಿ ರಾಜ್ಯ ಸರ್ಕಾರ ತಿಳಿಸಿದೆ.
ರಾಜ್ಯದಲ್ಲಿನ ಬಹುತೇಕ ನಕ್ಸಲರು ಸರ್ಕಾರಕ್ಕೆ ಶರಣಾದ ಕಾರಣ ನಕ್ಸಲ್ ನಿಗ್ರಹ ಪಡೆಯನ್ನು ರದ್ದುಪಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಾಲಿನ ಬಜೆಟ್ ಭಾಷಣದಲ್ಲಿ ಘೋಷಿಸಿದ್ದರು.
‘ಛತ್ತೀಸಗಡ, ಮಹಾರಾಷ್ಟ್ರದ ಕಡೆಯಿಂದ ಕೆಲ ನಕ್ಸಲರು ಕರ್ನಾಟಕ ಮತ್ತು ಕೇರಳದ ಕಡೆಗೆ ಬರುತ್ತಿದ್ದಾರೆ ಎಂದು ಗುಪ್ತಚರ ಮೂಲಗಳು ಹೇಳಿವೆ. ಹೀಗಾಗಿ ನಕ್ಸಲ್ ನಿಗ್ರಹ ಪಡೆಯ ಅವಧಿಯನ್ನು ವಿಸ್ತರಿಸಬೇಕು ಎಂದು ಮನವಿ ಸಲ್ಲಿಕೆಯಾಗಿತ್ತು. ವಿವರಗಳನ್ನು ಪರಿಶೀಲಿಸಿ ಪಡೆಯನ್ನು ಮುಂದುವರೆಸಲು ತೀರ್ಮಾನಿಸಲಾಗಿದೆ’ ಎಂದು ಗೃಹ ಇಲಾಖೆ ತನ್ನ ಆದೇಶದಲ್ಲಿ ವಿವರಿಸಿದೆ.
‘ನಕ್ಸಲ್ ನಿಗ್ರಹ ಪಡೆಗೆ ಅಧಿಕಾರಿಗಳು ಮತ್ತು ಸಿಬ್ಬಂದಿ ಸೇರಿ ಒಟ್ಟು 667 ಹುದ್ದೆಗಳು ಮಂಜೂರಾಗಿದ್ದು, ಅವುಗಳಲ್ಲಿ 248 ಹುದ್ದೆಗಳನ್ನು ಕೋಮುಸಂಘರ್ಷ ತಡೆ ವಿಶೇಷ ಕಾರ್ಯಾಚರಣೆಗೆ ವರ್ಗಾಯಿಸಲಾಗಿದೆ. 34 ಹುದ್ದೆಗಳನ್ನು ರಾಜ್ಯದ ವಿವಿಧ ಠಾಣೆಗಳಿಗೆ ನಿಯೋಜನೆ ಮಾಡಲಾಗಿದೆ. ಉಳಿದ 376 ಸಿಬ್ಬಂದಿ ನಕ್ಸಲ್ ನಿಗ್ರಹ ಪಡೆಯಲ್ಲೇ ಕಾರ್ಯನಿರ್ವಹಿಸಲಿದ್ದಾರೆ’ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.