ಶಿವಮೊಗ್ಗ: ರಾಜ್ಯದಲ್ಲಿ ವಕ್ಫ್ ಆಸ್ತಿ ಕಬಳಿಕೆ ಕುರಿತು ಅನ್ವರ್ ಮಾಣಿಪ್ಪಾಡಿ ನೀಡಿರುವ ವರದಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿವೇಶನದಲ್ಲಿ ಮಂಡನೆ ಮಾಡಿ ಚರ್ಚೆಗೆ ಅವಕಾಶ ಮಾಡಿಕೊಡಬೇಕು. ವಕ್ಫ್ ಆಸ್ತಿ ಲೂಟಿ ಮಾಡಿದವರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಮಾಜಿ ಉಪ ಡಿಸಿಎಂ ಕೆ.ಎಸ್. ಈಶ್ವರಪ್ಪ ಆಗ್ರಹಿಸಿದರು.
ವಕ್ಫ್ ಆಸ್ತಿಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಚಿವ ರೆಹಮಾನ್ ಖಾನ್ ಸೇರಿದಂತೆ ಕಾಂಗ್ರೆಸ್ ನಾಯಕರು ಲೂಟಿ ಮಾಡಿದ್ದಾರೆ. ಅದರಲ್ಲಿ ಬಿಜೆಪಿಯವರು ಸಹ ಇದ್ದಾರೆ. ರಾಜಕಾರಣಿಗಳು ವಕ್ಫ್ ಆಸ್ತಿಯನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ವಕ್ಫ್ ಆಸ್ತಿ ಒತ್ತುವರಿ ಮಾಡಿಕೊಂಡವರ ಮೇಲೆ ಇಲ್ಲಿಯವರೆಗೂ ಕ್ರಮಕೈಗೊಂಡಿಲ್ಲ. ಅಧಿವೇಶನದಲ್ಲಿ ವರದಿ ಮಂಡಿಸಿ ಚರ್ಚೆಗೂ ಕೂಡ ಅವಕಾಶ ನೀಡುತ್ತಿಲ್ಲ. ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ಘನಘೋರ ಅಪರಾಧ ಮಾಡುತ್ತಿದೆ ಎಂದರು.
ವಕ್ಫ್ ಆಸ್ತಿ ಕಬಳಿಕೆ ವರದಿಯನ್ನು ಬಹಿರಂಗಪಡಿಸದಂತೆ ಅನ್ವರ್ ಮಾಣಿಪ್ಪಾಡಿ ಅವರಿಗೆ ಬಿ.ವೈ. ವಿಜಯೇಂದ್ರ ಅವರು ₹ 150 ಕೋಟಿ ಹಣದ ಆಫರ್ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿ ತನಿಖೆಗೆ ಸಿಬಿಐಗೆ ವಹಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಅವರಿಗೆ ಸಿಬಿಐ ಮೇಲೆ ಮೋಹ ಬಂದಿರುವುದು ಸಂತೋಷದ ಸಂಗತಿ. ಸಿಬಿಐಗೆ ವಹಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇದೆ. ಮೊದಲು ಸರ್ಕಾರ ತನ್ನ ಕೆಲಸ ಮಾಡಲಿ ಎಂದು ತಿಳಿಸಿದರು.
ಅನ್ವರ್ ಮಾಣಿಪ್ಪಾಡಿ ಅವರು ಒಂದೊಂದು ಬಾರಿ ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಬಿ.ವೈ. ವಿಜಯೇಂದ್ರ ಅವರು ಬಿಜೆಪಿ ಕಚೇರಿಯಲ್ಲಿ ನನ್ನನ್ನು ಭೇಟಿ ಮಾಡಿದ್ದರು. ಕಾಂಗ್ರೆಸ್‌ನವರು ದುಡ್ಡುಕೊಟ್ಟರೆ ಪಡೆದುಕೊಳ್ಳಿ ಎಂದು ತಮಾಷೆಗೆ ಆಗ ಹೇಳಿದ್ದರು ಎಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದಾರೆ. ಈ ಪ್ರಕರಣದ ಸತ್ಯಾಂಶ ಹೊರಗೆ ಬರಲು ಸರ್ಕಾರ ಸಿಬಿಐಗೆ ವಹಿಸುವುದು ಸೂಕ್ತ ಎಂದರು.
ಮಠ, ದೇವಸ್ಥಾನ ಮತ್ತು ರೈತರ ಭೂಮಿಯಲ್ಲಿ ವಕ್ಫ್ ಎಂದು ನಮೂದಾಗಿರುವುದನ್ನು ತೆಗೆಯಲು ರಾಜ್ಯ ಸರ್ಕಾರ ಇಲ್ಲಿಯವರೆಗೂ ಮುಂದಾಗುತ್ತಿಲ್ಲ. ಕೇವಲ ನೋಟಿಸ್ ನೀಡಿ ಕೈತೊಳೆದುಕೊಂಡಿದೆ. ಕೂಡಲೇ ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿರುವುದನ್ನು ತೆಗೆಯಬೇಕು ಎಂದರು.
ರಾಜ್ಯದಲ್ಲಿ ಸರ್ಕಾರ ಬದುಕಿದೆಯೋ ಅಥವಾ ಸತ್ತಿದೆಯೋ ಗೊತ್ತಿಲ್ಲ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಇವರಿಂದ ಆಗುತ್ತಿಲ್ಲ. ಶಿವಮೊಗ್ಗ ಸೇರಿದಂತೆ ಇಡೀ ರಾಜ್ಯದಲ್ಲಿ ಅಭಿವೃದ್ಧಿ ಮರೀಚಿಕೆಯಾಗಿದೆ. ಇ–ಸ್ವತ್ತು ಮಾಡಿಸಲು ಜನರು ಪರದಾಡುತ್ತಿದ್ದಾರೆ. ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಹಣ ಕೊಡದೆ ಯಾವುದೇ ಕೆಲಸ ಆಗುವುದಿಲ್ಲ ಎಂದು ಆರೋಪಿಸಿದರು.
ಬಸವಣ್ಣನವರು ಜನಿಸಿದ ಬಸವನಬಾಗೇವಾಡಿಯಲ್ಲಿ 1008 ಸ್ವಾಮೀಜಿಗಳ ಪಾದಪೂಜೆ ಮಾಡುವುದರೊಂದಿಗೆ ಕ್ರಾಂತಿವೀರ ಬ್ರಿಗೇಡ್‌ನ್ನು ಫೆಬ್ರವರಿ 4ರಂದು ಉದ್ಘಾಟಿಸಲಾಗುವುದು ಎಂದು ತಿಳಿಸಿದರು.
ಉ.ಕ ಭಾಗಕ್ಕೆ ದ್ರೋಹದ ಅಧಿವೇಶನ
ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಜನಪರ ಚರ್ಚೆಗಳು ಆಗುತ್ತಿಲ್ಲ. ಇದು ಉತ್ತರ ಕರ್ನಾಟಕದ ಭಾಗಕ್ಕೆ ದ್ರೋಹದ ಅಧಿವೇಶನವಾಗಿದೆ. ಸರ್ಕಾರದಿಂದ ಈ ಭಾಗಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಈ ಅಧಿವೇಶನ ಯಾವುದೇ ರೀತಿಯಿಂದ ಅನುಕೂಲವಾಗಿಲ್ಲ ಎಂದು ಕೆ.ಎಸ್. ಈಶ್ವರಪ್ಪ ಆರೋಪಿಸಿದರು.
ಮುಡಾ ಹಗರಣದಿಂದ ಬೇರೆಡೆ ಸೆಳೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ಅಧಿವೇಶನದಲ್ಲಿ ಬೇರೆ ಬೇರೆ ವಿಷಯಗಳ ಕುರಿತು ಪ್ರಸ್ತಾವನೆ ಮಾಡುತ್ತಿದ್ದಾರೆ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.