ADVERTISEMENT

ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್. ಗೋಕುಲ್ ಅಮಾನತು

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 15:49 IST
Last Updated 4 ಜೂನ್ 2025, 15:49 IST
<div class="paragraphs"><p>ಅಮಾನತು</p></div>

ಅಮಾನತು

   

ಬೆಂಗಳೂರು: ಎಚ್‌ಎಂಟಿ ಕಂಪನಿಗೆ ನೀಡಿದ ₹ 14 ಸಾವಿರ ಕೋಟಿ ಮೌಲ್ಯದ ಅರಣ್ಯ ಜಮೀನು ಡಿನೋಟಿಫಿಕೇಷನ್‌ಗೆ ಸರ್ಕಾರದಿಂದ ಪೂರ್ವಾನುಮತಿ ಪಡೆಯದೆ ಸುಪ್ರೀಂಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ ಪ್ರಕರಣದಲ್ಲಿ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಎಪಿಸಿಸಿಎಫ್‌) ಆರ್. ಗೋಕುಲ್ ಅವರನ್ನು ಅಮಾನತು ಮಾಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.

ಸಚಿವ ಸಂಪುಟದ ಅನುಮೋದನೆ ಪಡೆಯದೆ ಬೆಂಗಳೂರು ಉತ್ತರ ತಾಲ್ಲೂಕಿನ ಪೀಣ್ಯ ಪ್ಲಾಂಟೇಷನ್‌ನಲ್ಲಿರುವ 443 ಎಕರೆ 6 ಗುಂಟೆ ಜಮೀನನ್ನು ಎಚ್‌ಎಂಟಿ ಕಂಪನಿಗೆ ಡಿನೋಟಿಫಿಕೇಶನ್‌ ಮಾಡಲು ಸುಪ್ರೀಂ ಕೋರ್ಟ್‌ಗೆ ಮಧ್ಯಂತರ ಅರ್ಜಿ ಸಲ್ಲಿಸಿದ ಪ್ರಕರಣದಲ್ಲಿ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್‌ ದವೆ, ನಿವೃತ್ತ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಗೋಗಿ, ಪ್ರಧಾನ ಕಾರ್ಯದರ್ಶಿ ಸ್ಮಿತಾ ಬಿಜ್ಜೂರ್ ಮತ್ತು ಆರ್. ಗೋಕುಲ್ ಅವರಿಗೆ ಅರಣ್ಯ ಇಲಾಖೆಯು ಪ್ರಾಥಮಿಕ ನೋಟಿಸ್‌ ನೀಡಿತ್ತು.

ADVERTISEMENT

ಸಂದೀಪ್‌ ದವೆ ಹೊರತುಪಡಿಸಿ ಉಳಿದ ಎಲ್ಲರೂ ನೋಟಿಸ್‌ಗೆ ಉತ್ತರ ನೀಡಿದ್ದರು. ದವೆ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ತನ್ನ ಅಭಿಪ್ರಾಯದ ಸಹಿತ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಅರಣ್ಯ ಇಲಾಖೆ ಸೂಚಿಸಿದೆ.

ಪ್ರಾಥಮಿಕ ನೋಟಿಸ್‌ ನೀಡಿದ ಬೆನ್ನಲ್ಲೆ ಸಿಬಿಐಗೆ ಪತ್ರ ಬರೆದ ಗೋಕುಲ್‌ ಅವರು, ‘ಬೇಲೆಕೇರಿ ಬಂದರಿನಲ್ಲಿ ಕಬ್ಬಿಣದ ಅದಿರು ಕಳ್ಳತನ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಪರ ಸಾಕ್ಷ್ಯ ನುಡಿದ ಕಾರಣಕ್ಕೆ ಎಚ್‌ಎಂಟಿ ಭೂವಿವಾದ ಪ್ರಕರಣದಲ್ಲಿ ನನ್ನನ್ನು ಬಲಿಪಶು ಮಾಡಿ ಮಾನಹಾನಿ ಮಾಡಲಾಗುತ್ತಿದೆ’ ಎಂದು ಆರೋಪಿಸಿದ್ದರು. ಈ ಬೆಳವಣಿಗೆಗಳ ನಡುವೆಯೇ ಗೋಕುಲ್‌ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.