ಕೃಷಿ ಉತ್ಪನ್ನ
ಬೆಂಗಳೂರು: ಕೃಷಿ ಮಾರುಕಟ್ಟೆ ಪ್ರಾಂಗಣದಿಂದ ಹೊರಗೆ ಕೃಷಿ ಉತ್ಪನ್ನಗಳ ಮಾರಾಟಕ್ಕೆ ನೀಡಿದ್ದ ಅವಕಾಶ ವಾಪಸ್ ಪಡೆದ ಬಳಿಕ ಎಪಿಎಂಸಿ ಪ್ರಾಂಗಣಗಳಲ್ಲಿ ವ್ಯಾಪಾರ ಜಿಗಿತ ಕಂಡಿದ್ದು, 2024–25ನೇ ಸಾಲಿನಲ್ಲಿ ₹75 ಸಾವಿರ ಕೋಟಿ ಮೌಲ್ಯದ ವಹಿವಾಟು ದಾಖಲಿಸಿದೆ.
ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ 2020ರಲ್ಲಿ ಕಾಯ್ದೆಗೆ ತಿದ್ದುಪಡಿ ತಂದು ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಹೊರಗೂ ರೈತರು ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟಿತ್ತು. ಇದರಿಂದ ಎಪಿಎಂಸಿಗಳಲ್ಲಿನ ವ್ಯಾಪಾರ ಗಣನೀಯವಾಗಿ ಕುಸಿದು ಆದಾಯವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದವು.
‘ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಹಾರ (ನಿಯಂತ್ರಣ ಮತ್ತು ಅಭಿವೃದ್ಧಿ) ಕಾಯ್ದೆ’ಗೆ ತಂದಿದ್ದ ತಿದ್ದುಪಡಿಯಿಂದಾಗಿ ಖಾಸಗಿಯವರಿಗೆ ಹಾಗೂ ಮಾರುಕಟ್ಟೆ ಹೊರಗೆ ರೈತರು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಅವಕಾಶ ದೊರಕಿತ್ತು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ, ಈ ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು ಎಂದು ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಹೇಳಿತ್ತು. ಅಧಿಕಾರಕ್ಕೆ ಬಂದ ನಂತರ ಭರವಸೆ ಈಡೇರಿಸಿತ್ತು. 2024 ಏಪ್ರಿಲ್‌ನಿಂದ ರೈತರು ಮಾರುಕಟ್ಟೆ ಒಳಗೇ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಆರಂಭಿಸಿದ್ದರು. ಕಳೆಗುಂದಿದ್ದ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣಗಳಿಗೆ ಮರುಜೀವ ಬಂದಿತ್ತು. ಒಂದೇ ವರ್ಷದಲ್ಲಿ ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಎಪಿಎಂಸಿಗಳು ಹೊಸ ದಾಖಲೆ ಬರೆದಿವೆ.
‘ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಪ್ರಾಂಗಣಗಳ ಸುಧಾರಣೆ, ರೈತಸ್ನೇಹಿ ಮಾರುಕಟ್ಟೆ ವ್ಯವಸ್ಥೆ, ಕೈಗಾರಿಕೆಗಳಿಗೆ ಪೂರಕವಾದ ಕೆಲವು ನೀತಿ ಸೇರಿದಂತೆ ಹಲವು ಸುಧಾರಣೆಗಳನ್ನು ಕಾಯ್ದೆಯಲ್ಲಿ ಅಳವಡಿಸಿದ್ದು ದಾಖಲೆಯ ವಹಿವಾಟಿಗೆ ಕಾರಣ. ಮಾರುಕಟ್ಟೆ ಪ್ರಾಂಗಣದ ಹೊರಗಿನ ವ್ಯವಹಾರ ಚಟುವಟಿಕೆಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲಾಗಿದೆ. ಅದಕ್ಕಾಗಿಯೇ ಹೆಚ್ಚುವರಿ ನಿರ್ದೇಶಕರನ್ನು ಒಳಗೊಂಡ ನಾಲ್ಕು ವಿಭಾಗವಾರು ಕಚೇರಿಗಳನ್ನು ತೆರೆಯಲಾಗಿದೆ. ತೂಕ, ಮಾರಾಟ, ಆದಾಯದ ಖಾತರಿಯನ್ನು ರೈತರಿಗೆ ನೀಡಲಾಗುತ್ತಿದೆ’ ಎನ್ನುತ್ತಾರೆ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ.
ಮಾರುಕಟ್ಟೆ ಪ್ರಾಂಗಣದ ಹೊರಗಿನ ವ್ಯವಹಾರ ಚಟುವಟಿಕೆಗಳನ್ನು ನಿಯಂತ್ರಿಸುವ ಜತೆಗೆ, ಇಲಾಖೆಯ ಅನುಮತಿ, ಪರವಾನಗಿ ಇಲ್ಲದೆ ಆನ್‌ಲೈನ್ ಮೂಲಕ ನಡೆಸುತ್ತಿದ್ದ ಇ–ಕಾಮರ್ಸ್, ಬಹುರಾಷ್ಟ್ರೀಯ ಕಂಪನಿಗಳ ಕೃಷಿ ಉತ್ಪನ್ನಗಳ ವಹಿವಾಟನ್ನು ಕಾಯ್ದೆಯ ವ್ಯಾಪ್ತಿಗೆ ತರಲಾಗಿದೆ. ಎಪಿಎಂಸಿಯ ಎಲ್ಲ ಕಾರ್ಯಚಟುವಟಿಕೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ. ಆನ್‌ಲೈನ್ ಪಾವತಿಗೆ ಅವಕಾಶ ಕಲ್ಪಿಸಲಾಗಿದೆ. ಅಕ್ಕಿ ಗಿರಣಿಗಳೂ ಸೇರಿ ಎಪಿಎಂಸಿ ಹೊರಗಿನ ಅಧಿಸೂಚಿತ ಕೃಷಿ ಉತ್ಪನ್ನಗಳ ವಹಿವಾಟು ಜಾಗಗಳನ್ನು ಉಪ ಮಾರುಕಟ್ಟೆ ಎಂದು ಘೋಷಿಸಿ, ಎಪಿಎಂಸಿ ನಿಯಂತ್ರಣಕ್ಕೆ ಒಳಪಡಿಸಲಾಗುತ್ತಿದೆ.
ಕೃಷಿ ಮಾರುಕಟ್ಟೆಯ ಒಳಗೆ ರೈತರಿಗೆ ಉತ್ತಮ ಬೆಲೆ ಹಣದ ಪಾವತಿಯ ಖಾತ್ರಿ ಇರುತ್ತದೆ. ರೈತರು ಎಪಿಎಂಸಿ ಮೇಲೆ ವಿಶ್ವಾಸ ಇಟ್ಟ ಕಾರಣಕ್ಕೆ ದಾಖಲೆಯ ವಹಿವಾಟು ಸಾಧ್ಯವಾಗಿದೆಶಿವಾನಂದ ಪಾಟೀಲ ಕೃಷಿ ಮಾರುಕಟ್ಟೆ ಸಚಿವ
ದಂಡ ವಸೂಲಿಯಲ್ಲೂ ದಾಖಲೆ
ಮಾರುಕಟ್ಟೆ ಶುಲ್ಕ ಪಾವತಿಸದೆ ವಂಚಿಸುತ್ತಿದ್ದ 6230 ಪ್ರಕರಣಗಳನ್ನು ಪತ್ತೆಹಚ್ಚಲಾಗಿದ್ದು ₹4.80 ಕೋಟಿ ದಂಡ ಸೇರಿ ₹6.40 ಕೋಟಿ ವಸೂಲು ಮಾಡಲಾಗಿದೆ. ಏಕೀಕೃತ ಮಾರಾಟ ವೇದಿಕೆ ಅಡಿ ಆನ್‌ಲೈನ್ ಮೂಲಕ ಮಾರುಕಟ್ಟೆ ಶುಲ್ಕ ಪಾವತಿಸಿ ಸಾಗಾಣಿಕೆ ಪರವಾನಗಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮಾರುಕಟ್ಟೆ ಶುಲ್ಕದ ಜತೆಗೆ ಬಳಕೆದಾರರ ಶುಲ್ಕ ಬಾಡಿಗೆ ಸೇರಿದಂತೆ ಎಲ್ಲ ಹಣಕಾಸಿನ ವಹಿವಾಟವನ್ನೂ ಆನ್‌ಲೈನ್ ಮೂಲಕವೇ ಪಾವತಿಸಲು ₹10 ಕೋಟಿ ವೆಚ್ಚದಲ್ಲಿ ಡಿಜಿಟಲೀಕರಣ ಕಾರ್ಯ ಕೈಗೊಳ್ಳಲಾಗಿದೆ. ಆನ್‌ಲೈನ್ ಮೂಲಕವೇ ₹30.48 ಕೋಟಿ ಶುಲ್ಕ ಸಂಗ್ರಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.