ADVERTISEMENT

₹200 ಕೋಟಿ ವೆಚ್ಚದಲ್ಲಿ ಎಪಿಎಂಸಿಗಳ ಆಧುನೀಕರಣ: ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 11:06 IST
Last Updated 11 ಡಿಸೆಂಬರ್ 2020, 11:06 IST
   

ಬೆಂಗಳೂರು:ರಾಜ್ಯದಲ್ಲಿ ನಬಾರ್ಡ್‌ನ ₹200 ಕೋಟಿ ನೆರವಿನೊಂದಿಗೆ ಎಪಿಎಂಸಿಗಳನ್ನು ಆಧುನೀಕರಿಸುವ ಮೂಲಕ ಅವುಗಳಿಗೆ ಶಕ್ತಿ ತುಂಬಲಾಗುವುದು ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.

ಈ ಆಧುನಿಕರಣ ಕಾಮಗಾರಿಗಳಿಗೆ ಮುಖ್ಯಮಂತ್ರಿಯವರು ಸದ್ಯವೇ ಚಾಲನೆ ನೀಡಲಿದ್ದಾರೆ. ಹೊಸ ಕಾಯ್ದೆಯಿಂದ ಎಪಿಎಂಸಿಗಳನ್ನು ಮುಚ್ಚಲಾಗುತ್ತದೆ ಎಂಬ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಹೊಸ ಕಾನೂನು ಅರ್ಥ ಮಾಡಿಕೊಳ್ಳದೇ ಇರುವವರು ರೈತರಿಗೆ ತೊಂದರೆ ಆಗುತ್ತದೆ ಎಂದು ಸುಳ್ಳು ವಿಚಾರಗಳನ್ನು ಹಬ್ಬಿಸುತ್ತಿದ್ದಾರೆ. ರೈತನಿಗೆ ತಾನು ಬೆಳೆದದ್ದನ್ನು ಮಾರಲು ಹೆಚ್ಚಿನ ಆಯ್ಕೆಗಳು ಸಿಕ್ಕಿವೆ. ಹಿಂದೆ ಎಪಿಎಂಸಿ ಬಿಟ್ಟು ಬೇರೆ ಕಡೆ ಮಾರುವುದಕ್ಕೆ ಅವಕಾಶ ಇರಲಿಲ್ಲ. ಈಗ ತನ್ನ ಇಷ್ಟ ಬಂದ ಕಡೆ, ಹೆಚ್ಚು ಬೆಲೆಗೆ ಉತ್ಪನ್ನಗಳನ್ನು ಮಾರಿಕೊಳ್ಳಬಹುದು ಎಂದು ಸೋಮಶೇಖರ್‌ ವಿವರಿಸಿದರು.

ADVERTISEMENT

ಕಳೆದ 6 ರಿಂದ 7 ವರ್ಷಗಳಲ್ಲಿ 62 ಬಹುರಾಷ್ಟ್ರೀಯ ಕಂಪನಿಗಳಿಗೆ ಕೃಷಿ ಉತ್ಪನ್ನಗಳ ಖರೀದಿಗೆ ಪರವಾನಗಿ ನೀಡಲಾಗಿದೆ. ಈ ರೀತಿ ನೀಡಿದವರಲ್ಲಿ ಸಿದ್ದರಾಮಯ್ಯ, ಕುಮಾರಸ್ವಾಮಿ, ಜಗದೀಶ ಶೆಟ್ಟರ ಎಲ್ಲ ಮುಖ್ಯಮಂತ್ರಿಗಳೂ ಸೇರಿದ್ದಾರೆ ಎಂದರು.

ಹೊಸ ಕಾಯ್ದೆ ಪ್ರಕಾರ, ಯಾವುದೇ ಕಂಪನಿ ರೈತನಿಗೆ ಅನ್ಯಾಯ ಮಾಡಿದರೆ ಜಿಲ್ಲಾ ಮ್ಯಾಜಿಸ್ಟ್ರೇಟರ್‌ ಅವರಿಗೆ ದೂರು ಸಲ್ಲಿಸಬಹುದಾಗಿದೆ. 30 ದಿನಗಳಲ್ಲಿ ಅದನ್ನು ಇತ್ಯರ್ಥಗೊಳಿಸುತ್ತಾರೆ. ರೈತರಿಗೆ ಎಲ್ಲ ರೀತಿಯ ರಕ್ಷಣೆಯೂ ಇದೆ ಎಂದು ಸೋಮಶೇಖರ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.