ADVERTISEMENT

ಕ್ರೈಸ್ತರ ಕ್ಷಮೆ ಯಾಚಿಸುವೆ: ಗೂಳಿಹಟ್ಟಿ ಶೇಖರ್‌

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2021, 19:12 IST
Last Updated 21 ಅಕ್ಟೋಬರ್ 2021, 19:12 IST
ಗೂಳಿಹಟ್ಟಿ ಶೇಖರ್‌
ಗೂಳಿಹಟ್ಟಿ ಶೇಖರ್‌   

ಬೆಂಗಳೂರು: ‘ರಾಜ್ಯದಲ್ಲಿ ಮಸೀದಿ, ದರ್ಗಾ ಮತ್ತು ಚರ್ಚ್‌ಗಳಿಗೆ ಸಮರ್ಪಕವಾಗಿ ಅನುದಾನ ಹಂಚಿಕೆ ಮಾಡುವ ಉದ್ದೇಶದಿಂದ ಅವುಗಳ ಮಾಹಿತಿ ಸಂಗ್ರಹಿಸಲಾಗುತ್ತಿದೆಯೇ ಹೊರತು, ಇದರ ಹಿಂದೆ ಯಾವುದೇ ದುರುದ್ದೇಶವಿಲ್ಲ’ ಎಂದು ವಿಧಾನಮಂಡಲದ ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಸಮಿತಿಯ ಸದಸ್ಯ ಗೂಳಿಹಟ್ಟಿ ಶೇಖರ್‌ ತಿಳಿಸಿದ್ದಾರೆ.

ಸುದ್ದಿಗಾರರ ಜತೆ ಗುರುವಾರ ಮಾತನಾಡಿದ ಅವರು, ಸಮಿತಿಯ ಸಭೆಗಳಲ್ಲಿ ಶಾದಿ ಮಹಲ್‌ಗಳ ನಿರ್ಮಾಣ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅನುದಾನ ಹಂಚಿಕೆಯ ವಿಚಾರ ಪ್ರಸ್ತಾಪವಾಗುತ್ತದೆ. ಅದಕ್ಕೆ ನಿಖರ ಮಾಹಿತಿಯ ಅಗತ್ಯವಿದೆ ಎಂದರು.

ಈ ಕಾರಣಕ್ಕಾಗಿ ಚರ್ಚ್‌ ಮಾತ್ರ ಅಲ್ಲ, ಮಸೀದಿ ಮತ್ತು ದರ್ಗಾಗಳ ಬಗ್ಗೆಯೂ ಮಾಹಿತಿ ಕೇಳಲಾಗಿದೆ. ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಸೇರಿ ಮಾಹಿತಿ ಕಲೆ ಹಾಕುತ್ತಾರೆ. ಅನುದಾನದ ಸಮರ್ಪಕ ಹಂಚಿಕೆಗೆ ನೈಜ ಮಾಹಿತಿಯ ಅಗತ್ಯವಿದೆ ಎಂದು ಗೂಳಿಹಟ್ಟಿ ಶೇಖರ್‌
ಹೇಳಿದರು.

ADVERTISEMENT

ಕ್ಷಮೆ ಯಾಚನೆ: ‘ನನ್ನ ಮಾತಿನಿಂದ ಮೂಲ ಕ್ರೈಸ್ತ ಸಮುದಾಯಕ್ಕೆ ನೋವಾಗಿದ್ದರೆ ಬಹಿರಂಗ ಕ್ಷಮೆ ಕೋರುತ್ತೇನೆ. ನಾವು ಆ ಸಮುದಾಯದ ಪರವಾಗಿದ್ದೇವೆ. ಬಲವಂತವಾಗಿ ಮತಾಂತರ ಮಾಡುವವರ ವಿರುದ್ಧ ಸಮರ ಮುಂದುವರಿಸುತ್ತೇನೆ. ಆದರೆ, ಮೂಲ ಕ್ರೈಸ್ತ ಧರ್ಮದವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವುದಿಲ್ಲ’ ಎಂದು ಹೇಳಿದರು.

‘ಹಿಂದೂಗಳಾಗಿ ಹುಟ್ಟಿ ನಾವು ಸಾಕಷ್ಟು ನೋವು ತಿನ್ನುತ್ತಿದ್ದೇವೆ. ಚರ್ಚ್‌ಗಳ ಮಾಹಿತಿ ಕಲೆ ಹಾಕುವ ಸಂದರ್ಭದಲ್ಲಿ ಗಲಾಟೆ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದರು. ಚರ್ಚ್‌ಗಳ ಸಮೀಕ್ಷೆ ನಡೆಸುತ್ತಿಲ್ಲ, ಅನುದಾನದ ಸಮರ್ಪಕ ಹಂಚಿಕೆಗಾಗಿ ಮಾಹಿತಿ ಮಾತ್ರ ಕೇಳುತ್ತಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.