ADVERTISEMENT

ಕ್ಷಮೆ ಕೇಳುವುದರಿಂದ ಯಾರೂ ಸಣ್ಣವರಾಗುವುದಿಲ್ಲ: ಕಮಲ್‌ ಹಾಸನ್‌ಗೆ BSY ತಿರುಗೇಟು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜೂನ್ 2025, 9:17 IST
Last Updated 3 ಜೂನ್ 2025, 9:17 IST
   

ಬೆಂಗಳೂರು: 'ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಸಂವೇದನಾರಹಿತವಾಗಿ ಮಾತನಾಡಿರುವುದು ಅತ್ಯಂತ ಖೇದನೀಯ ಮತ್ತು ಖಂಡನಾರ್ಹ. ಅವರು ಗೌರವಯುತವಾಗಿ ಕನ್ನಡ ಮತ್ತು ಕನ್ನಡಿಗರ ಕ್ಷಮೆ ಕೇಳಲೇಬೇಕು. ಕ್ಷಮೆ ಕೇಳುವುದರಿಂದ ಯಾರೂ ಸಣ್ಣವರಾಗುವುದಿಲ್ಲ' ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಕನ್ನಡವೇ ಸತ್ಯ, ಕನ್ನಡವೇ ನಿತ್ಯ’ ಕನ್ನಡಿಗರ ಘೋಷ ವಾಕ್ಯ ಮಾತ್ರವಲ್ಲ, ಇದು ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿಯ ಮೇಲಿರುವ ಕನ್ನಡಿಗರ ದೀಕ್ಷೆ. ಕನ್ನಡ ಯಾವುದೇ ನಿರ್ದಿಷ್ಟ ಭಾಷೆಯಿಂದ ಹುಟ್ಟಿಕೊಂಡಿಲ್ಲ ಎಂದು ಅನೇಕ ಹಿರಿಯ ಭಾಷಾ ಪರಿಣಿತರು ಸಾಬೀತುಪಡಿಸಿದ್ದಾರೆ. ಇತಿಹಾಸ, ಭಾಷಾಶಾಸ್ತ್ರ ತಜ್ಞರಲ್ಲದ ಕಲಾವಿದ ಕಮಲ್ ಹಾಸನ್ ಕನ್ನಡ ಭಾಷೆಯ ಬಗ್ಗೆ ಸಂವೇದನಾರಹಿತವಾಗಿ ಮಾತನಾಡಿರುವುದು ಅತ್ಯಂತ ಖೇದನೀಯ ಮತ್ತು ಖಂಡನಾರ್ಹ ಎಂದಿದ್ದಾರೆ.

ಅನಗತ್ಯವಾಗಿ ಶಾಂತಿ, ಸೌಹಾರ್ದತೆ, ಸಾಮರಸ್ಯಕ್ಕೆ ಭಂಗವುಂಟು ಮಾಡುವ ಅವರ ವರ್ತನೆ ಸರಿಯಲ್ಲ. ಅವರ ಅಭಿಪ್ರಾಯ ಮಂಡನೆಯ ಭರದಲ್ಲಿ ಕೋಟ್ಯಂತರ ಕನ್ನಡಿಗರ ಭಾವನೆಗಳಿಗೆ ಘಾಸಿಯುಂಟು ಮಾಡಿದ್ದು, ಅವರು ಗೌರವಯುತವಾಗಿ ಕನ್ನಡ ಮತ್ತು ಕನ್ನಡಿಗರ ಕ್ಷಮೆ ಕೇಳಲೇಬೇಕು. ಕ್ಷಮೆ ಕೇಳುವುದರಿಂದ ಯಾರೂ ಸಣ್ಣವರಾಗುವುದಿಲ್ಲ, ದುರಹಂಕಾರದಿಂದ ಯಾರೂ ದೊಡ್ಡವರಾಗುವುದಿಲ್ಲ ಎಂದು ಅವರು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

ADVERTISEMENT

'ಪ್ರೀತಿ ಎಂದಿಗೂ ಕ್ಷಮೆಯಾಚಿಸದು'

‘ಕನ್ನಡ ಭಾಷೆ ಕುರಿತ ನನ್ನ ಹೇಳಿಕೆಗೆ ಅದರ ಮೇಲೆ ನನಗಿರುವ ಪ್ರೀತಿಯೇ ಕಾರಣ. ಪ್ರೀತಿ ಎಂದಿಗೂ ಕ್ಷಮೆ ಯಾಚಿಸುವುದಿಲ್ಲ’ ಎಂದು ಕಮಲ್‌ ಹಾಸನ್‌ ಬುಧವಾರ ಹೇಳಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು ‘ನನ್ನ ಹೇಳಿಕೆ ಮುಂದಿಟ್ಟುಕೊಂಡು ವಿವಾದ ಸೃಷ್ಟಿಸುತ್ತಿರುವವರು ಈ ವಿಚಾರ ಕುರಿತು ಗೊಂದಲ ಉಂಟುಮಾಡುತ್ತಿದ್ದಾರೆ’ ಎಂದು ದೂರಿದ್ದರು

‘ನಾನು ಏನು ಹೇಳಿದ್ದೇನೋ ಅದನ್ನು ಪ್ರೀತಿ ಕಾರಣದಿಂದಾಗಿಯೇ ಹೇಳಿದ್ದೇನೆ ಎಂಬುದು ನನ್ನ ಭಾವನೆ. ಇತಿಹಾಸಕಾರರು ನನಗೆ ಭಾಷೆಯ ಚರಿತ್ರೆ ಬೋಧಿಸಿದ್ದಾರೆ. ಹೀಗಾಗಿ ಬೇರೆ ಯಾವ ಉದ್ದೇಶದಿಂದಲೂ ನಾನು ಹೇಳಿಲ್ಲ’ ಎಂದೂ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.