ADVERTISEMENT

ಒಳಮೀಸಲಾತಿ ಸಮೀಕ್ಷೆ ಸಮಸ್ಯೆ ಸರಿಪಡಿಸಿ: ಎಡ- ಬಲ ಸಮುದಾಯದ ನಾಯಕರ ನಿಯೋಗದ ಮನವಿ

ನ್ಯಾ. ಎಚ್‌.ಎನ್‌.ನಾಗಮೋಹನದಾಸ್‌ ಅವರಿಗೆ ಎಡ- ಬಲ ಸಮುದಾಯದ ನಾಯಕರ ನಿಯೋಗದ ಮನವಿ

​ಪ್ರಜಾವಾಣಿ ವಾರ್ತೆ
Published 10 ಮೇ 2025, 15:24 IST
Last Updated 10 ಮೇ 2025, 15:24 IST
ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್ ಅವರನ್ನು ಪರಿಶಿಷ್ಟ ಜಾತಿಗಳ ಎಡ-ಬಲ ಸಮುದಾಯಗಳ ಮುಖಂಡರ ನಿಯೋಗವು ಭೇಟಿ ಮಾಡಿ, ಮನವಿ ಸಲ್ಲಿಸಿತು
ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್ ಅವರನ್ನು ಪರಿಶಿಷ್ಟ ಜಾತಿಗಳ ಎಡ-ಬಲ ಸಮುದಾಯಗಳ ಮುಖಂಡರ ನಿಯೋಗವು ಭೇಟಿ ಮಾಡಿ, ಮನವಿ ಸಲ್ಲಿಸಿತು   

ಬೆಂಗಳೂರು: ‘ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸಲು ನಡೆಸುತ್ತಿರುವ ಸಮೀಕ್ಷೆಯಲ್ಲಿ ಹಲವು ತಾಂತ್ರಿಕ ತೊಡಕುಗಳಿವೆ. ಅವುಗಳನ್ನು ಶೀಘ್ರವೇ ನಿವಾರಿಸಿ’ ಎಂದು ಒಳಮೀಸಲಾತಿಗೆ ಸಂಬಂಧಿಸಿದ  ವಿಚಾರಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನದಾಸ್‌ ಅವರಿಗೆ ಎಡ ಮತ್ತು ಬಲ ಸಮುದಾಯದ ನಾಯಕರ ನಿಯೋಗವು ಮನವಿ ಮಾಡಿದೆ.

ಮಾಜಿ ಸಚಿವ ಎಚ್‌.ಆಂಜನೇಯ, ಸಾಹಿತಿ ಎಲ್‌.ಹನುಮಂತಯ್ಯ, ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ.ಸಾಗರ್‌ ಅವರಿದ್ದ ನಿಯೋಗವು ವಿಚಾರಣಾ ಆಯೋಗದ ಕಚೇರಿಯಲ್ಲಿ ನಾಗಮೋಹನದಾಸ್ ಅವರನ್ನು ಶನಿವಾರ ಭೇಟಿ ಮಾಡಿ, ಮನವಿ ಸಲ್ಲಿಸಿದೆ.

‘ಒಳಮೀಸಲಾತಿಯನ್ನು ಶೀಘ್ರವೇ ಜಾರಿಗೆ ತರಬೇಕು ಎಂಬ ಸರ್ಕಾರದ ಕಾಳಜಿ ಮತ್ತು ಬದ್ಧತೆ ಸ್ವಾಗತಾರ್ಹ. ಆದರೆ ಸಮೀಕ್ಷಾ ಕಾರ್ಯಕ್ಕೆ ನಿಯೋಜಿತರಾಗಿರುವ ಸಿಬ್ಬಂದಿಗೆ, ಕೇವಲ 3 ಗಂಟೆ ತರಬೇತಿ ನೀಡಲಾಗಿದೆ. ಪರಿಣಾಮವಾಗಿ ಅವರು ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ನಡೆಸಲು ಸಾಧ್ಯವಾಗುತ್ತಿಲ್ಲ. ಅವರಿಗೆ ಮತ್ತೊಮ್ಮೆ ಒಂದು ದಿನದ ತರಬೇತಿ ನೀಡಬೇಕು’ ಎಂದು ನಿಯೋಗವು ಕೋರಿದೆ.

ADVERTISEMENT

‘ಸಮೀಕ್ಷೆಯಲ್ಲಿ ಬಳಸಲಾಗುತ್ತಿರುವ ಪ್ರಶ್ನಾವಳಿಗಳು ಕ್ಲಿಷ್ಟವಾಗಿವೆ. ಪರಿಶಿಷ್ಟ ಜಾತಿ ಸಮುದಾಯಗಳ ಜನರ ಶೈಕ್ಷಣಿಕ ಮಟ್ಟವು ಕಡಿಮೆ ಇದ್ದು, ಅವರಿಗೆ ಅರ್ಥವಾಗುವ ರೀತಿಯಲ್ಲಿ ಪ್ರಶ್ನೆಗಳನ್ನು ವಿವರಿಸುವ ಅವಶ್ಯ ಇದೆ. ಇಲ್ಲದೇ ಇದ್ದಲ್ಲಿ, ಸಮೀಕ್ಷೆಯಲ್ಲಿ ತಪ್ಪು ಮಾಹಿತಿ ಸಂಗ್ರಹವಾಗುವ ಅಪಾಯವಿದೆ’ ಎಂದು ನಿಯೋಗವು ಕಳವಳ ವ್ಯಕ್ತಪಡಿಸಿದೆ.

‘ಸಮೀಕ್ಷೆಗಾಗಿ ರೂಪಿಸಲಾಗಿರುವ ಆ್ಯಂಡ್ರಾಯ್ಡ್‌ ಅಪ್ಲಿಕೇಷನ್‌ನಲ್ಲಿ ಕೆಲ ಸಮಸ್ಯೆಗಳಿವೆ. ಹಳೆಯ ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಈ ಅಪ್ಲಿಕೇಷನ್‌ ಡೌನ್‌ಲೋಡ್‌ ಆಗುವುದಿಲ್ಲ. ಡೌನ್‌ಲೋಡ್‌ ಆದರೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಈ ಬಗ್ಗೆ ತಕ್ಷಣವೇ ಕ್ರಮ ತೆಗೆದುಕೊಳ್ಳಬೇಕು’ ಎಂದು ಕೋರಿದೆ.

ಭೇಟಿಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಎಚ್‌.ಆಂಜನೇಯ, ‘ಒಳಮೀಸಲಾತಿ ಜಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬದ್ಧರಾಗಿದ್ದಾರೆ. ಪರಿಶಿಷ್ಟ ಜಾತಿಗಳ ಯಾವುದೇ ಸಮುದಾಯಕ್ಕೂ ಅನ್ಯಾಯವಾಗದ ರೀತಿ ಒಳಮೀಸಲಾತಿ ಕಲ್ಪಿಸಬೇಕು ಎಂಬುದು ಅವರ ಒತ್ತಾಸೆ. ಅದರ ಸಲುವಾಗಿ ನಡೆಯುತ್ತಿರುವ ಸಮೀಕ್ಷೆಯು ವಾಸ್ತವಕ್ಕೆ ಹತ್ತಿರವಿರುವ ರೀತಿಯಲ್ಲಿ ನೋಡಿಕೊಳ್ಳುವ ಹೊಣೆಗಾರಿಕೆ ವಿಚಾರಣಾ ಆಯೋಗದ್ದು’ ಎಂದಿದ್ದಾರೆ.

‘ತಪ್ಪು ಮಾಹಿತಿಗೆ ಕಡಿವಾಣ ಹಾಕಿ’

‘ಲಿಂಗಾಯತ ಸಮಾಜದಲ್ಲಿ ಗುರುಸ್ಥಾನದಲ್ಲಿರುವ ವೀರಶೈವ ಸಮುದಾಯದ ಕೆಲವರು ಸಮೀಕ್ಷೆ ವೇಳೆ ತಾವು ಬೇಡಜಂಗಮರು ಎಂದು ಬರೆಸುತ್ತಿದ್ದಾರೆ ಎಂಬ ಆರೋಪವಿದೆ. ಇದರಿಂದಾಗಿ ಮೂಲ ಬೇಡಜಂಗಮರಿಗೆ ಅನ್ಯಾಯವಾಗಲಿದೆ. ಇಂತಹ ತಪ್ಪುಗಳಿಗೆ ಕಡಿವಾಣ ಹಾಕಬೇಕು. ಸುಳ್ಳು ಮಾಹಿತಿ ನೀಡುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ನಿಯೋಗವು ಕೋರಿದೆ.

‘ಪಡಿತರ ಚೀಟಿಯಲ್ಲಿ (ಕುಟುಂಬ ಡೇಟಾಬೇಸ್‌) ಹೆಸರು ಇಲ್ಲದಿದ್ದರೆ ಪ್ರತಿ ಕುಟುಂಬದಲ್ಲಿ ಹೆಚ್ಚುವರಿಯಾಗಿ ಇಬ್ಬರನ್ನಷ್ಟೇ ಸೇರಿಸಲು ಅವಕಾಶವಿದೆ. ಬಹಳಷ್ಟು ಕುಟುಂಬಗಳಲ್ಲಿ ಸಣ್ಣ ಮಕ್ಕಳನ್ನು ಇನ್ನೂ ಪಡಿತರ ಚೀಟಿಗೆ ಸೇರಿಸಿಲ್ಲ. ಹೊಸದಾಗಿ ಮದುವೆಯಾಗಿ ಬಂದ ಹೆಣ್ಣುಮಕ್ಕಳ ಹೆಸರೂ ಚೀಟಿಯಲ್ಲಿ ಇಲ್ಲ. ಅಂತಹವರ ಹೆಸರು ಮತ್ತು ವಿವರಗಳನ್ನು ಸಮೀಕ್ಷೆಯಲ್ಲಿ ಕಲೆಹಾಕಲು ಆಗುತ್ತಿಲ್ಲ. ಇದು ಗಂಭೀರವಾದ ಸಮಸ್ಯೆ ಆಗಿದ್ದು ತಕ್ಷಣವೇ ಸರಿಪಡಿಸಬೇಕು’ ಎಂದು ಆಗ್ರಹಿಸಿದೆ.

‘ಸಮೀಕ್ಷೆ ನಡೆಸುತ್ತಿರುವ ಕೆಲ ಸಿಬ್ಬಂದಿ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನಮೂದಿಸುತ್ತಿದ್ದಾರೆ ಎಂಬ ಆರೋಪವಿದೆ. ಈ ಸಂಬಂಧ ದೂರುಗಳು ಬಂದರೆ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.