ADVERTISEMENT

ಅರ್ಜಿ ಸಮಿತಿ ಸಭೆ: ಸುರೇಶ್‌ಕುಮಾರ್ ಸಭಾತ್ಯಾಗ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 0:04 IST
Last Updated 21 ಫೆಬ್ರುವರಿ 2025, 0:04 IST
ಎಸ್. ಸುರೇಶ್‌ಕುಮಾರ್‌
ಎಸ್. ಸುರೇಶ್‌ಕುಮಾರ್‌   

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಧೋರಣೆ ಖಂಡಿಸಿ ಬಿಜೆಪಿ ಶಾಸಕ ಎಸ್‌. ಸುರೇಶ್‌ ಕುಮಾರ್ ಅರ್ಜಿ ಸಮಿತಿಯ ಸಭೆಯಿಂದ ಗುರುವಾರ ಸಭಾತ್ಯಾಗ ಮಾಡಿದ್ದಾರೆ.

‘ಬಡಾವಣೆಯಲ್ಲಿ ನಿವೇಶನ ಹಂಚಿಕೆಯಾಗಿ ಒಂಬತ್ತು ವರ್ಷಗಳಾಗಿವೆ. ನಿವೇಶನ ಖರೀದಿಸಿದವರಿಗೆ ಮನೆ ಕಟ್ಟಿಕೊಳ್ಳಲು ಅಗತ್ಯವಾದ ರಸ್ತೆ, ಕುಡಿಯುವ ನೀರು, ವಿದ್ಯುತ್, ಒಳಚರಂಡಿ ಮತ್ತಿತರ ಮೂಲಸೌಕರ್ಯ ಕಲ್ಪಿಸಿಲ್ಲ. ಈ ಕುರಿತು ಅರ್ಜಿ ಸಮಿತಿಗೆ ದೂರು ನೀಡಲಾಗಿತ್ತು. ವಿಚಾರಣೆ ನಡೆಸಿ, ನಾಗರಿಕರಿಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲು ಹಂಗಾಮಿ ಅಧ್ಯಕ್ಷ  ಎಸ್.ಟಿ.ಸೋಮಶೇಖರ್ ಅಧ್ಯಕ್ಷತೆಯ ಸಮಿತಿ ಶಿಫಾರಸು ಮಾಡಬೇಕಿತ್ತು. 20 ದಿನಗಳ ಹಿಂದೆ ಅರ್ಜಿ ಸಮಿತಿಯಲ್ಲಿ ಉಪಸ್ಥಿತರಿದ್ದ ಬಿಡಿಎ ಕಾರ್ಯದರ್ಶಿಗೆ ದೂರು ಸಲ್ಲಿಸಿದ್ದರೂ, ಸ್ಪಂದನೆ ದೊರೆತಿಲ್ಲ. ತಮ್ಮ ವೈಫಲ್ಯ ಮರೆಮಾಚಲು 20X30 ಅಳತೆಯ ನಿವೇಶನ ಕೊಂಡವರು ಮಾಡುತ್ತಿರುವ ಅಪಪ್ರಚಾರವನ್ನು ನಂಬಿ ಸಮಿತಿಯ ಸದಸ್ಯರು ಇಲ್ಲಿ ವಿಷಯ ಪ್ರಸ್ತಾವನೆ ಮಾಡುತ್ತಿದ್ದಾರೆ ಎಂಬ ಬಿಡಿಎ ಅಧಿಕಾರಿಗಳ ವರ್ತನೆ ವಿರುದ್ದ ಆಕ್ರೋಶಕ್ಕೆ ಒಳಗಾದೆ. ಹಾಗಾಗಿ, ಸಭಾತ್ಯಾಗ ಮಾಡಬೇಕಾಯಿತು’ ಎಂದು ಹೇಳಿದ್ದಾರೆ.

‘ಬಡಾವಣೆಗೆ ಮೂಲಸೌಕರ್ಯಗಳನ್ನು ಒದಗಿಸುವ ಕುರಿತು ಮೂರು ವರ್ಷಗಳಲ್ಲಿ 11 ಸಭೆಗಳು ನಡೆದಿವೆ. 2022ರಲ್ಲಿ ನಡೆದಿದ್ದ ಸಮಿತಿ ಸಭೆಯಲ್ಲಿ ಸೌಕರ್ಯ ಒದಗಿಸಲು 2023ರ ಡಿಸೆಂಬರ್‌ವರೆಗೆ ಕಾಲಮಿತಿ ನಿಗದಿ ಮಾಡಲಾಗಿತ್ತು. ಇಂದಿಗೂ ಸಮಸ್ಯೆ ಬಗೆಹರಿದಿಲ್ಲ. ಗುರುವಾರ ನಡೆದ ಸಭೆಯಲ್ಲೂ ಸ್ಪಷ್ಟ ಭರವಸೆ ದೊರೆಯಲಿಲ್ಲ. ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರವೂ ಸಹ ನಾಡಪ್ರಭು ಕೆಂಪೇಗೌಡ ಬಡಾವಣೆಯು ವಿಫಲಗೊಂಡಿರುವ ಯೋಜನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಮನೆ ನಿರ್ಮಿಸಲು ಈ ಹಿಂದೆ ನೀಡಿದ್ದ ಐದು ವರ್ಷಗಳ ಅವಧಿಯನ್ನು ಈಗ ಮೂರು ವರ್ಷಗಳಿಗೆ ಇಳಿಸಿದೆ. ಇದು ಯಾವ ರೀತಿಯ ತರ್ಕ’ ಎಂದು ಪ್ರಶ್ನಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.