ADVERTISEMENT

ಕೆಂಪಣ್ಣ ಆಯೋಗದ ವರದಿ ಮಂಡಿಸಲು ನಿರ್ದೇಶನ ಕೋರಿ ಅರ್ಜಿ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 22:29 IST
Last Updated 6 ಸೆಪ್ಟೆಂಬರ್ 2021, 22:29 IST
ಹೈಕೋರ್ಟ್
ಹೈಕೋರ್ಟ್   

ಬೆಂಗಳೂರು: ಅರ್ಕಾವತಿ ಬಡಾವಣೆ ಡಿನೋಟಿಫಿಕೇಷನ್ ಪ್ರಕರಣದ ತನಿಖೆ ನಡೆಸಿರುವ ನ್ಯಾಯಮೂರ್ತಿ ಎಚ್.ಎಸ್. ಕೆಂಪಣ್ಣ ಆಯೋಗ ನೀಡಿರುವ ವರದಿಯನ್ನು ವಿಧಾನ ಮಂಡಲದಲ್ಲಿ ಮಂಡಿಸಲು ನಿರ್ದೇಶನ ನೀಡಲು ಕೋರಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಕಮಿಟಿ ಫಾರ್ ಪಬ್ಲಿಕ್ ಅಕೌಂಟಬಿಲಿಟಿ ಟ್ರಸ್ಟ್‌ ಸಲ್ಲಿಸಿರುವ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮುರ್ತಿ ಸತೀಶ್ ಚಂದ್ರ ಶರ್ಮಾ ಅವರಿದ್ದ ಪೀಠ ವಿಚಾರಣೆ ನಡೆಸಿತು.

‘2017ರ ಆಗಸ್ಟ್ 23ರಂದು ನ್ಯಾಯಮೂರ್ತಿ ಕೆಂಪಣ್ಣ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ವಿಚಾರಣಾ ಆಯೋಗದ ಕಾಯ್ದೆ 1952ರ ಸೆಕ್ಷನ್ 3(4) ಪ್ರಕಾರ ವರದಿ ಸಲ್ಲಿಕೆಯಾದ 6 ತಿಂಗಳಲ್ಲಿ ಶಾಸನಸಭೆಯ ಮುಂದೆ ಮಂಡಿಸಬೇಕಾಗುತ್ತದೆ. ಆಯೋಗ ವರದಿ ಸಲ್ಲಿಸಿ 4 ವರ್ಷಗಳು ಕಳೆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ADVERTISEMENT

ವರದಿ ಮಂಡಿಸಲು ನಿರ್ದೇಶನ ನೀಡಲು ಸಾಧ್ಯವಾಗದಿದ್ದರೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿದ ಪೀಠ, ವಿಚಾರಣೆಯನ್ನು ನ.15ಕ್ಕೆ ಮುಂದೂಡಿತು.

ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಆದೇಶಗಳನ್ನು ಉಲ್ಲಂಘಿಸಿ ಅರ್ಕಾವತಿ ಬಡಾವಣೆಯಲ್ಲಿ 541 ಎಕರೆ ಭೂಮಿಯನ್ನು ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಡಿನೋಟಿಫೈ ಮಾಡಿದ್ದಾರೆ ಎಂಬ ಗಂಭೀರ ಆರೋಪಗಳು ಬಂದ ಬಳಿಕ ವಿಚಾರಣೆಗೆ ಆಯೋಗ ನೇಮಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.