ADVERTISEMENT

ಎಪಿಎಂಸಿ ತಿದ್ದುಪಡಿ‌ ಮಸೂದೆಗೆ ವಿಧಾನ ಪರಿಷತ್ ಒಪ್ಪಿಗೆ

ಕಾಂಗ್ರೆಸ್ ಸದಸ್ಯರ ಸಭಾತ್ಯಾಗದ ನಡುವೆ ಧ್ವನಿಮತದ ಮೂಲಕ ಅಂಗೀಕಾರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2020, 21:54 IST
Last Updated 9 ಡಿಸೆಂಬರ್ 2020, 21:54 IST
ವಿಧಾನ ಪರಿಷತ್‌ ಕಲಾಪ
ವಿಧಾನ ಪರಿಷತ್‌ ಕಲಾಪ   

ಬೆಂಗಳೂರು:ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ತಿದ್ದುಪಡಿ ಮಸೂದೆ-2020ಕ್ಕೆ ಬುಧವಾರ ರಾತ್ರಿ ವಿಧಾನ ಪರಿಷತ್‌ನ ಒಪ್ಪಿಗೆ ದೊರಕಿತು. ಕಾಂಗ್ರೆಸ್‌ ಸದಸ್ಯರ ಸಭಾತ್ಯಾಗದ ನಡುವೆಯೇ ಧ್ವನಿಮತದ ಮೂಲಕ ಅಂಗೀಕಾರ ನೀಡಲಾಯಿತು.

ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಮಧ್ಯಾಹ್ನ ಮಸೂದೆಯನ್ನು ಸದನದಲ್ಲಿ ಮಂಡಿಸಿದರು. ಐದು ಗಂಟೆಗಳ ಕಾಲ ಮಸೂದೆಯ ಮೇಲೆ ಚರ್ಚೆ ನಡೆಯಿತು. ಮಸೂದೆಯನ್ನು ಹಿಂಪಡೆಯುವಂತೆ ಅಥವಾ ಜಂಟಿ ಸದನ ಸಮಿತಿ ಇಲ್ಲವೇ ಜಂಟಿ ಆಯ್ಕೆ ಸಮಿತಿಯ ಪರಿಶೀಲನೆಗ ಒಪ್ಪಿಸುವಂತೆ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಆಗ್ರಹಿಸಿದರು.

ಸರ್ಕಾರ ಪ್ರತಿಪಕ್ಷಗಳ ಬೇಡಿಕೆಯನ್ನು ಒಪ್ಪಲಿಲ್ಲ. ಕಾಂಗ್ರೆಸ್ ಸದಸ್ಯರು ಸರ್ಕಾರದ ನಿಲುವನ್ನು ವಿರೋಧಿಸಿ ಸಭಾತ್ಯಾಗ ಮಾಡಿದರು. ಸದನದಲ್ಲಿದ್ದ ಜೆಡಿಎಸ್‌ನ ಐವರು ಸದಸ್ಯರು ಮತ ವಿಭಜನೆಗೆ ಆಗ್ರಹಿಸಿದರು‌.‌ ಸಭಾಪತಿ ಕೆ.‌ ಪ್ರತಾಪಚಂದ್ರ ಶೆಟ್ಟಿ, ಜೆಡಿಎಸ್ ಸದಸ್ಯರ ಬೇಡಿಕೆ ಪರಿಗಣಿಸದೆ ಮಸೂದೆಯನ್ನು ಧ್ವನಿಮತಕ್ಕೆ ಹಾಕಿದರು‌. ಧ್ವನಿಮತದೊಂದಿಗೆ ಮಸೂದೆಗೆ ಒಪ್ಪಿಗೆ ದೊರೆಯಿತು.

ADVERTISEMENT

ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ: ಕೇಂದ್ರದ ಆಣತಿಯಂತೆ ರಾಜ್ಯ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ಈ ತಿದ್ದುಪಡಿ ತರಲಾಗಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ದೂರಿದರು.

‘ಜಿಯೋ ಮಾರ್ಟ್ ತರಹದ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲ ಮಾಡಲೆಂದೇ ಈ ತಿದ್ದುಪಡಿ ತರಲಾಗಿದೆ’ ಎಂದು ಜೆಡಿಎಸ್‌ನ ಮರಿತಿಬ್ಬೇಗೌಡ ಆರೋಪಿಸಿದರು.

‘ಎಪಿಎಂಸಿ ವ್ಯವಸ್ಥೆಯನ್ನು ರದ್ದು ಮಾಡುವ ಸಂಚು ಮಸೂದೆಯ ಹಿಂದಿದೆ. ಮಸೂದೆ ಹಿಂಪಡೆಯಿರಿ ಇಲ್ಲವೇ ಪರಿಶೀಲನೆಗೆ ಒಪ್ಪಿಸಿ' ಎಂದು ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಆಗ್ರಹಿಸಿದರು‌.

ಕಾಂಗ್ರೆಸ್‌ನ ಅಲ್ಲಂ ವೀರಭದ್ರಪ್ಪ, ಆರ್‌.ಬಿ. ತಿಮ್ಮಾಪುರ, ಪಿ.ಆರ್‌. ರಮೇಶ್‌, ಎಂ. ನಾರಾಯಣಸ್ವಾಮಿ, ಪ್ರಕಾಶ್‌ ರಾಠೋಡ್‌, ಜೆಡಿಎಸ್‌ನ ಎಸ್‌.ಎಲ್‌. ಭೋಜೇಗೌಡ ಮಸೂದೆಯನ್ನು ವಿರೋಧಿಸಿದರು. ಬಿಜೆಪಿಯ ಸಾಬಣ್ಣ ತಳವಾರ, ಕೆ. ಪ್ರತಾಪಸಿಂಹ ನಾಯಕ್‌ ಮತ್ತಿತರು ಬೆಂಬಲಿಸಿದರು.

ಕಾಂಗ್ರೆಸ್ ನ ಬಿ.ಕೆ. ಹರಿಪ್ರಸಾದ್ ಮಾತನಾಡಿ, 'ಈ ರೀತಿಯ ತಿದ್ದುಪಡಿಗಳು ದೇಶದಲ್ಲಿ ಮತ್ತೆ ಕಂಪನಿ ಸರ್ಕಾರ ಬರುವುದಕ್ಕೆ ಕಾರಣವಾಗುವ ಅಪಾಯವಿದೆ.ದೇಶದ ಶೇಕಡ 80ರಷ್ಟು ಜನರ ಮೇಲೆ ಈ ತಿದ್ದುಪಡಿ ದುಷ್ಪರಿಣಾಮ ಬೀರಲಿದೆ' ಎಂದರು.

'ಈ ಮಸೂದೆ ರೈತ ವಿರೋಧಿಯಾಗಿದೆ.‌ ಈ ಮಸೂದೆಯನ್ನು ಅಂಗೀಕರಿಸಿದರೆ ಸರ್ಕಾರಕ್ಕೆ‌ ರೈತರ ಶಾಪ ತಗಲುತ್ತದೆ. ಕೆಟ್ಟ ಕೆಲಸ ಮಾಡಬೇಡಿ. ಮಸೂದೆ ಹಿಂಪಡೆಯಿರಿ ಇಲ್ಲವೇ ಪರಿಶೀಲನೆಗೆ ಒಪ್ಪಿಸಿ' ಎಂದು ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಆಗ್ರಹಿಸಿದರು‌

‘ಎಪಿಎಂಸಿ ಮುಚ್ಚುವುದಿಲ್ಲ’

ಪ್ರತಿಪಕ್ಷಗಳ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌, ‘ತಿದ್ದುಪಡಿ ಮಸೂದೆಯಿಂದ ಯಾವುದೇ ಎಪಿಎಂಸಿಗಳನ್ನು ಮುಚ್ಚುವುದಿಲ್ಲ. ಎಪಿಎಂಸಿ ಆಸ್ತಿಗಳನ್ನೂ ಪರಭಾರೆ ಮಾಡುವುದಿಲ್ಲ. ರೈತರಿಗೆ ಶಕ್ತಿ ತುಂಬುವುದೇ ನಮ್ಮ ಉದ್ದೇಶ‘ ಎಂದು ಸಮರ್ಥಿಸಿಕೊಂಡರು.
ರೈತರು ಮುಕ್ತವಾಗಿ ಕೃಷಿ ಉತ್ಪನ್ನ ಮಾರಾಟ ಮಾಡಲು ತಿದ್ದುಪಡಿಯಿಂದ ಸಾಧ್ಯವಾಗಲಿದೆ. ಬೆಂಬಲ ಬೆಲೆ ವ್ಯವಸ್ಥೆಯನ್ನು ರದ್ದು ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ಮಸೂದೆ ಸಂಪೂರ್ಣವಾಗಿ ರೈತರ ಪರವಾಗಿದೆ. ಯಾವ ಅನುಮಾನವೂ ಬೇಡ ಎಂದರು.

ಭೋಜೇಗೌಡರ ಗಾಯನ

ಎಪಿಎಂಸಿ ಮಸೂದೆಯನ್ನು ವಿರೋಧಿಸಿ ಮಾತನಾಡಿದ ಜೆಡಿಎಸ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ಅವರು ಜಾನಪದ ಗೀತೆ, ಮಂಕುತಿಮ್ಮನ ಕಗ್ಗ, ರೈತಪರ ಕವನಗಳನ್ನು ಹಾಡಿದರು.‘ಬೆಳಗಾಗಿ ನಾನೆದ್ದು ಯಾರ‍್ಯಾರ ನೆನೆಯಲಿ...’ ಗೀತೆಯೊಂದಿಗೆ ಮಾತು ಆರಂಭಿಸಿದ ಅವರು ಮೂರು ಗೀತೆಗಳನ್ನು ಹಾಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.