ADVERTISEMENT

ಕುಮಾರಸ್ವಾಮಿ ಹತಾಶೆಯಿಂದ ಮಾತನಾಡುತ್ತಿದ್ದಾರೆ: ಆರಗ ಜ್ಞಾನೇಂದ್ರ

​ಪ್ರಜಾವಾಣಿ ವಾರ್ತೆ
Published 9 ಜನವರಿ 2023, 8:27 IST
Last Updated 9 ಜನವರಿ 2023, 8:27 IST
   

ಬೆಂಗಳೂರು: 'ನನ್ನ ಮನೆಗೆ ಬಂದು ಹಣದ ಗಂಟು ಬಿಚ್ವುವ ಧೈರ್ಯ ತೋರಲು ಯಾರಿಗೂ ಈವರೆಗೆ ಅವಕಾಶ ನೀಡಿಲ್ಲ. ರಾಜಕೀಯವಾಗಿ ಹತಾಶರಾಗಿರುವ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ‌. ಕುಮಾರಸ್ವಾಮಿ ಅವರು ಸುಳ್ಳು ಆರೋಪದ ಮೂಲಕ ನನ್ನ ತೇಜೋವಧೆಗೆ ಪ್ರಯತ್ನಿಸುತ್ತಿದ್ದಾರೆ' ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ.

'ಸ್ಯಾಂಟ್ರೋ ರವಿ ಗೃಹ ಸಚಿವರ ಮನೆಯಲ್ಲೇ ಹಣದ ಗಂಟು ಬಿಚ್ಚಿ, ಎಣಿಕೆ ಮಾಡುತ್ತಿರುವ ವಿಡಿಯೊ ಇದೆ' ಎಂಬ ಕುಮಾರಸ್ವಾಮಿ ಹೇಳಿಕೆ ಕುರಿತು ಸೋಮವಾರ ಪ್ರತಿಕ್ರಿಯಿಸಿರುವ ಅವರು, 'ನಾನು ಜೀವನದಲ್ಲಿ ನೈತಿಕತೆ ಪಾಲಿಸಿಕೊಂಡು ಬಂದಿದ್ದೇನೆ. ಯಾವತ್ತೂ, ಯಾರಿಗೂ ನನ್ನ ಮನೆಗೆ ಬಂದು ಹಣದ ಗಂಟು ಬಿಚ್ಚುವ ಅವಕಾಶ ನೀಡಿಲ್ಲ' ಎಂದಿದ್ದಾರೆ.

'ಸ್ಯಾಂಟ್ರೋ ರವಿ ಸೇರಿದಂತೆ ಹಲವರು ನನ್ನನ್ನು ಭೇಟಿ ಮಾಡಿರಬಹುದು. ಬರುವ ಎಲ್ಲರ ಹಿನ್ನೆಲೆ ಕುರಿತು ಪೊಲೀಸ್ ಪ್ರಮಾಣಪತ್ರ ಕೇಳಲು ಆಗುವುದಿಲ್ಲ. ಬಂದು ಜತೆಗೆ ನಿಂತು, ಫೋಟೊ ತೆಗೆಸಿಕೊಂಡಿರಬಹುದು' ಎಂದಿದ್ದಾರೆ.

ADVERTISEMENT

ಸ್ಯಾಂಟ್ರೋ ರವಿಯ ಹಿನ್ನೆಲೆ, ಆತನ ವಿರುದ್ಧ ದಾಖಲಾಗಿದ್ದ ಪ್ರಕರಣಗಳ ಕುರಿತು ತನಿಖೆ ನಡೆಸುವಂತೆ ಮೈಸೂರು ನಗರ ಪೊಲೀಸ್ ಕಮಿಷನರ್ ಅವರಿಗೆ ಸೂಚಿಸಲಾಗಿದೆ. ಅವನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವಂತೆಯೂ ನಿರ್ದೇಶನ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

'ಕುಮಾರಸ್ವಾಮಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ್ದಾರೆ. ಹೀಗೆ ಮಾಡುವುದರಿಂದ ಅವರಿಗೆ ಏನು ಲಾಭ ಇದೆಯೋ ಗೊತ್ತಿಲ್ಲ' ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.