ADVERTISEMENT

ಸಿಎಎ ವಾ‍‍ಪಸ್‌ ಪಡೆಯಿರಿ ಆರ್ಚ್‌ ಬಿಷಪ್‌ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಜನವರಿ 2020, 20:00 IST
Last Updated 9 ಜನವರಿ 2020, 20:00 IST
ಆರ್ಚ್ ಬಿಷಪ್ ಡಾ. ಪೀಟರ್‌ ಮಚಾದೊ
ಆರ್ಚ್ ಬಿಷಪ್ ಡಾ. ಪೀಟರ್‌ ಮಚಾದೊ   

ಬೆಂಗಳೂರು: ‘ಧರ್ಮದ ಆಧಾರದಲ್ಲಿ ಪೌರತ್ವ ನೀಡುವ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು’ ಎಂದು ಅಖಿಲ ಕರ್ನಾಟಕ ಕ್ರೈಸ್ತ ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷರೂ ಆಗಿರುವ ಬೆಂಗಳೂರಿನ ಆರ್ಚ್ ಬಿಷಪ್ ಡಾ. ಪೀಟರ್‌ ಮಚಾದೊ ಅವರು ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗೆ ಮನವಿ ಮಾಡಿ ಗುರುವಾರ ಪತ್ರ ಬರೆದಿದ್ದಾರೆ.

‘ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ವಲಸಿಗರಿಗೆ ಮಾತ್ರ ಭಾರತದ ಪೌರತ್ವ ನೀಡುವ ಕಾಯ್ದೆ ಅಂಗೀಕರಿಸಲಾಗಿದೆ. ಇದು ಜನರಲ್ಲಿ ಅಪಾರ್ಥ ಮತ್ತು ಗೊಂದಲವನ್ನು ಸೃಷ್ಟಿಸಿದೆ. ಅಲ್ಲದೇ ಪ್ರತಿಭಟನೆ ಹಾಗೂ ಹಿಂಸಾಚಾರಕ್ಕೆ ಕಾರಣವಾಗಿದೆ’ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

‘ಪೌರತ್ವ ನೀಡುವಾಗ ಧರ್ಮವನ್ನು ಪರಿಗಣಿಸದೆ ವ್ಯಕ್ತಿಗತ ಅರ್ಹತೆಯನ್ನು ಪರಿಗಣಿಸಬೇಕು. ಆಗ ಮಾತ್ರ ವಲಸಿಗರಿಗೆ ನ್ಯಾಯ ಕಲ್ಪಿಸಿದಂತಾಗಲಿದೆ. ಪೌರತ್ವ ತಿದ್ದುಪಡಿ ಕಾಯ್ದೆಯು ಅನುಷ್ಠಾನವಾದರೆ ದೇಶದ ನಾಗರಿಕರನ್ನು ಧರ್ಮದ ಆಧಾರದಲ್ಲಿ ವಿಭಜಿಸಿದಂತೆ ಆಗಲಿದೆ ಎಂದಿದ್ದಾರೆ.‘ಪ್ರತಿಭಟನೆಗಳು ದಿನೇ ದಿನೇ ದೇಶದಾದ್ಯಂತ ತೀವ್ರಗೊಳ್ಳುತ್ತಿದೆ. ಕಾಯ್ದೆ ವಿರೋಧಿಸುತ್ತಿರುವ ಜನರೊಂದಿಗೆ ಸರ್ಕಾರ ಸಂವಾದ ನಡೆಸಿ ನ್ಯಾಯಯುತ ಪರಿಹಾರ ನೀಡಬೇಕು. ದೇಶ ಹಾಗೂ ನಾಗರಿಕರ ಒಳಿತಿಗಾಗಿ ಕಾಯ್ದೆಯನ್ನು ಹಿಂಪಡೆದರೆ ಯಾವುದೇ ರೀತಿಯ ತಪ್ಪಾಗುವುದಿಲ್ಲ’ ಎಂದಿದ್ದಾರೆ.

ADVERTISEMENT

‘ಧರ್ಮದ ಆಧಾರದಲ್ಲಿ ಭೇದಭಾವಕ್ಕೆ ಒಳಗಾಗಿ ಹಿಂಸೆ ಅನುಭವಿಸುತ್ತಿರುವವರ ಪರವಾಗಿ ನಾವಿರು
ತ್ತೇವೆ. ನಾವೆಲ್ಲರೂ ಒಂದೇ ಕುಟುಂಬದವರಂತೆ ಜೀವಿಸುವಂತಾಗಲಿ ಎಂದು ಆಶಿಸುತ್ತೇವೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

***

ನಮಗೆ ಸಂವಿಧಾನದ ಮೇಲೆ ಅಪಾರ ಗೌರವವಿದೆ. ಕಾಯ್ದೆ ವಾಪಸ್ ಪಡೆದರೆ ಅಲ್ಪಸಂಖ್ಯಾತರ ಹಕ್ಕುಗಳನ್ನು ಸರ್ಕಾರ ಗೌರವಿಸಿದೆ ಎಂಬ ಸಂದೇಶವನ್ನು ರವಾನಿಸಿದಂತೆ ಆಗಲಿದೆ
-ಡಾ. ಪೀಟರ್‌ ಮಚಾದೊ, ಬೆಂಗಳೂರಿನ ಆರ್ಚ್ ಬಿಷಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.