ADVERTISEMENT

ಇಸ್ಲಾಮಿಕ್‌ ರಾಷ್ಟ್ರಗಳೊಂದಿಗೆ ವ್ಯಾಪಾರ ನಿಲ್ಲಿಸುತ್ತೀರಾ: ಪ್ರಿಯಾಂಕ್‌ ಖರ್ಗೆ

ಬಿಜೆಪಿ ನಾಯಕರಿಗೆ ಕಾಂಗ್ರೆಸ್‌ನ ಪ್ರಿಯಾಂಕ್‌ ಖರ್ಗೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2022, 15:41 IST
Last Updated 26 ಮಾರ್ಚ್ 2022, 15:41 IST
ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ   

ಬೆಂಗಳೂರು: ಹಿಂದೂ ದೇವಾಲಯಗಳ ಬಳಿ ಮುಸ್ಲಿಮರು ವ್ಯಾಪಾರ ಮಾಡುವುದನ್ನು ವಿರೋಧಿಸುವ ಬಿಜೆಪಿ ನಾಯಕರಿಗೆ ಇಸ್ಲಾಂಮಿಕ್‌ ರಾಷ್ಟ್ರಗಳ ಜತೆ ವಹಿವಾಟು ನಿಲ್ಲಿಸುವ ಘೋಷಣೆ ಮಾಡುವ ಧೈರ್ಯವಿದೆಯೆ ಎಂದು ಕಾಂಗ್ರೆಸ್‌ ಶಾಸಕ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಭಾರತಕ್ಕೆ ಇಸ್ಲಾಮಿಕ್‌ ರಾಷ್ಟ್ರಗಳ ಜತೆ ವಹಿವಾಟು ಬೇಡ ಎಂದು ಹೇಳುವ ಧೈರ್ಯ ಇದೆಯೆ? ಹಾಗೆ ಹೇಳಿದರೆ ಕರ್ನಾಟಕದಲ್ಲಿನ ಅರ್ಧದಷ್ಟು ಹೂಡಿಕೆ ವಾಪಸ್‌ ಹೋಗುತ್ತದೆ’ ಎಂದರು.

ಬಿಜೆಪಿಯವರು ವ್ಯಾಪಾರದಲ್ಲಿ ಜಾತಿ, ಧರ್ಮ ತರುತ್ತಿದ್ದಾರೆ. ತಳ ಮಟ್ಟದಲ್ಲಿ ಒಂದು ಸಮುದಾಯದ ವಿರುದ್ಧ ಅಸಹನೆ ತೋರುತ್ತಿದ್ದಾರೆ. ಅದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವ್ಯಕ್ತಪಡಿಸುವ ಧೈರ್ಯ ಮಾಡಲಿ ನೋಡೋಣ ಎಂದು ಹೇಳಿದರು.

ADVERTISEMENT

ಇಸ್ಲಾಮಿಕ್‌ ರಾಷ್ಟ್ರಗಳ ಜತೆ ಭಾರತವು ಲಕ್ಷಾಂತರ ಕೋಟಿ ರೂಪಾಯಿ ಮೊತ್ತದ ವ್ಯಾಪಾರ ವಹಿವಾಟು ಹೊಂದಿದೆ. ಸೌದಿ ಅರೇಬಿಯಾ, ಇರಾಕ್‌, ಮಲೇಷಿಯಾ, ಬಾಂಗ್ಲಾದೇಶ ಸೇರಿದಂತೆ ಇಸ್ಲಾಂ ಧರ್ಮದವರ ಪ್ರಾಬಲ್ಯದ ರಾಷ್ಟ್ರಗಳ ಜತೆಗೆ ದೊಡ್ಡ ಪ್ರಮಾಣದ ಆರ್ಥಿಕ ವಹಿವಾಟು ಇದೆ. ಇಸ್ಲಾಮಿಕ್ ರಾಷ್ಟ್ರಗಳಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಖರೀದಿಸುವುದಿಲ್ಲ ಎಂದು ಹೇಳುವ ಸ್ಥಿತಿಯಲ್ಲಿ ಭಾರತ ಇದೆಯೆ ಎಂದು ಕೇಳಿದರು.

1.5 ಕೋಟಿ ಭಾರತೀಯರು ಇಸ್ಲಾಮಿಕ್‌ ರಾಷ್ಟ್ರಗಳಲ್ಲಿ ದುಡಿಯುತ್ತಿದ್ದಾರೆ. ಅವರನ್ನೆಲ್ಲ ಇಲ್ಲಿಗೆ ಕರೆಸಿ ಉದ್ಯೋಗ ಕೊಡಲು ಸಾಧ್ಯವಿದೆಯೆ? ವಿವಿಧ ಧರ್ಮಗಳ 7.5 ಲಕ್ಷ ಭಾರತೀಯ ವಿದ್ಯಾರ್ಥಿಗಳು ಇಸ್ಲಾಮಿಕ್‌ ರಾಷ್ಟ್ರಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅವರನ್ನು ವಾಪಸ್‌ ಕರೆಸಿ, ಇಲ್ಲಿಯೇ ಶಿಕ್ಷಣದ ವ್ಯವಸ್ಥೆ ಮಾಡಲು ಆಗುತ್ತಾ? ಈ ದೇಶಗಳಿಗೆ ಭಾರತದ ಕೃಷಿ ಉತ್ಪನ್ನಗಳ ರಫ್ತು ನಿಲ್ಲಿಸಲು ಸಾಧ್ಯವೆ ಎಂದರು.

‘ರೇಷ್ಮೆ ಬೆಳೆಯನ್ನು ಟಿಪ್ಪು ಸುಲ್ತಾನ್‌, ಕಾಫಿಯನ್ನು ಸೂಫಿ ಸಂತ ಬಾಬಾ ಬುಡನ್‌ ಭಾರತಕ್ಕೆ ತಂದರೆಂದು ಅವುಗಳನ್ನು ಬೆಳೆಯುವುದನ್ನು ನಿಲ್ಲಿಸಲು ಆಗುತ್ತಾ? ಹೈದರಾಲಿ ನಿರ್ಮಿಸಿದ್ದೆಂಬ ಕಾರಣಕ್ಕೆ ಲಾಲ್‌ ಬಾಗ್‌ ಸುಟ್ಟು ಹಾಕಬೇಕೆ’ ಎಂದು ಪ್ರಿಯಾಂಕ್‌ ಪ್ರಶ್ನೆ ಮಾಡಿದರು.

ನಿರುದ್ಯೋಗ ತಾಂಡವ:ಕೌಶಲ ಅಭಿವೃದ್ಧಿ ಇಲಾಖೆಯಲ್ಲಿ ವಿದೇಶಿ ಉದ್ಯೋಗ ಕೋಶವಿದೆ. ₹ 6.51 ಕೋಟಿ ವೆಚ್ಚ ಮಾಡಿ ಒಬ್ಬ ವೈದ್ಯ, ಒಬ್ಬ ದಾದಿಯನ್ನು ಅಬುಧಾಬಿಗೆ ಮತ್ತು 16 ಮನೆಗೆಲಸದವರನ್ನು ಕುವೈತ್‌ಗೆ ಕಳಿಸಿರುವುದೇ ಈ ಕೋಶದ ಸಾಧನೆ ಎಂದರು.

ವಿಪ್ರೊ ಕಂಪನಿಯವರ ಧರ್ಮ ನೋಡುತ್ತೀರಾ?

‘ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿರುವ ವಿಪ್ರೊ ಕಂಪನಿ ಯಾವ ಧರ್ಮದವರದ್ದು? ನಿಮ್ಮ ಮಕ್ಕಳು ಕೆಲಸಕ್ಕೆ ಅರ್ಜಿ ಸಲ್ಲಿಸುವಾಗ ಆ ಕಂಪನಿ ಯಾವ ಧರ್ಮದವರದ್ದು ಎಂಬುದನ್ನೂ ನೋಡುತ್ತೀರಾ’ ಎಂದು ಪ್ರಿಯಾಂಕ್‌ ಖರ್ಗೆ ಬಿಜೆಪಿ ನಾಯಕರಿಗೆ ಪ್ರಶ್ನೆ ಹಾಕಿದರು.

ವಿಪ್ರೊ ದೇಶ ಕಟ್ಟುವ ಸಂಸ್ಥೆಯಲ್ಲವೆ. ಅವರಿಗೂ ಪಾಕಿಸ್ತಾನಕ್ಕೆ ಹೋಗಿ ಉದ್ಯಮ ಸ್ಥಾಪಿಸಲು ಅವಕಾಶ ಇತ್ತು. ಹಾಗೆ ಹೋಗಲಿಲ್ಲ, ಇಲ್ಲಿಯೇ ಉಳಿದು ದೇಶ ಕಟ್ಟುವ ಕೆಲಸ ಮಾಡಿದರು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.