
ನವದೆಹಲಿ: ‘ಕರ್ನಾಟಕದಲ್ಲಿ ಹಳದಿ ಎಲೆ ರೋಗ ಹಾಗೂ ಎಲೆ ಚುಕ್ಕಿ ರೋಗಗಳಿಂದಾಗಿ ಅಡಿಕೆ ಬೆಳೆಗಾರರು ತತ್ತರಿಸಿದ್ದಾರೆ. ಅಡಿಕೆಗೆ ವಿಶೇಷ ಪ್ಯಾಕೇಜ್ ಘೋಷಿಸಿ ರೈತರ ನೆರವಿಗೆ ಕೇಂದ್ರ ಸರ್ಕಾರ ಧಾವಿಸಬೇಕು‘ ಎಂದು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಗುರುವಾರ ಇಲ್ಲಿ ಒತ್ತಾಯಿಸಿದರು.
ಅಡಿಕೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಲೋಕಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿದ ಅವರು, ’ಈ ಭೀಕರ ರೋಗಗಳ ಜೊತೆಗೆ ಸತತವಾಗಿ ನಾಲ್ಕು ತಿಂಗಳು ಸುರಿದ ಭಾರೀ ಮಳೆಯಿಂದಾಗಿ ಅಡಿಕೆ ತೋಟಗಳಲ್ಲಿ ಭಾರೀ ನಷ್ಟವಾಗಿದೆ. ಅನೇಕ ಕಡೆಗಳಲ್ಲಿ ಇಡೀ ತೋಟಗಳೇ ನಾಶವಾಗಿವೆ. ಪರಿಣಾಮವಾಗಿ, ಅನೇಕ ರೈತರು ಈ ವರ್ಷ ನಿರೀಕ್ಷಿಸಿದ್ದ ಫಸಲಿನ ಕೇವಲ ನಾಲ್ಕನೇ ಭಾಗವಷ್ಟೇ ದೊರೆಯುವ ಸ್ಥಿತಿ ಎದುರಿಸುತ್ತಿದ್ದಾರೆ. ವಿಶೇಷ ಪ್ಯಾಕೇಜ್ ಘೋಷಿಸಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಹಾಗೂ ರೋಗ ನಿಯಂತ್ರಣಕ್ಕೆ ಉಪಕ್ರಮಗಳನ್ನು ಕೈಗೊಳ್ಳಬೇಕು‘ ಎಂದು ಅವರು ಆಗ್ರಹಿಸಿದರು.
‘ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಲ್ಲೂ ಗಂಭೀರ ಲೋಪಗಳಿವೆ. ಇದರಿಂದಾಗಿ, 2024–25ನೇ ಸಾಲಿನಲ್ಲಿ ಬೆಳೆ ನಷ್ಟ ಅನುಭವಿಸಿದ ಸಾವಿರಾರು ರೈತರಿಗೆ ಈವರೆಗೆ ಪರಿಹಾರ ಸಿಕ್ಕಿಲ್ಲ. ಅನೇಕ ಮಳೆಮಾಪನ ಕೇಂದ್ರಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಶಿವಮೊಗ್ಗ ಜಿಲ್ಲೆಯಲ್ಲೇ 100 ಕೇಂದ್ರಗಳ ಪೈಕಿ ಶೇ 50ರಷ್ಟು ಕೆಲಸ ಮಾಡುತ್ತಿಲ್ಲ. ಜತೆಗೆ, ಮೂರು ವರ್ಷಕ್ಕೊಮ್ಮೆ ಮಾತ್ರ ತಾಂತ್ರಿಕ ಮಾನದಂಡಗಳು ಪರಿಷ್ಕರಣೆ ಆಗುತ್ತಿವೆ. ಈ ಎಲ್ಲ ಕಾರಣಗಳಿಂದಾಗಿ ಹಲವಾರು ಅರ್ಹ ರೈತರು ಯೋಗ್ಯ ಪರಿಹಾರವನ್ನೇ ಪಡೆಯದ ಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಮೀಪದ ಹಾಗೂ ಹವಾಮಾನಕ್ಕೆ ತಕ್ಕಂತೆ ನಿಖರ ಮಾಹಿತಿ ಹೊಂದಿರುವ ಕೇಂದ್ರಗಳ ಆಧಾರದ ಮೇಲೆ ರೈತರಿಗೆ 2024–25ರ ಪರಿಹಾರವನ್ನು ಮರು ಲೆಕ್ಕ ಹಾಕಬೇಕು. ಮಳೆ ಎಸ್‌ಎಂಎಸ್ ಸೇವೆಯನ್ನು ಪುನರ್‌ಸ್ಥಾಪಿಸಬೇಕು‘ ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.