ADVERTISEMENT

ಅಡಿಕೆಗೆ ಎಲೆ ಚುಕ್ಕಿ ರೋಗ: ಔಷಧಿಗೆ ₹ 4 ಕೋಟಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2022, 19:45 IST
Last Updated 3 ಅಕ್ಟೋಬರ್ 2022, 19:45 IST
   

ಬೆಂಗಳೂರು: ಎಲೆ ಚುಕ್ಕಿ ರೋಗ ಬಾಧಿತವಾಗಿರುವ ಅಡಿಕೆ ತೋಟಗಳಿಗೆ ಔಷಧಿ ಸಿಂಪಡಿಸಲು ರೈತರಿಗೆ ಸಹಾಯಧನ ವಿತರಿಸುವುದಕ್ಕಾಗಿ ₹ 4 ಕೋಟಿ ಅನುದಾನ ಬಿಡುಗಡೆ ಮಾಡಿ ತೋಟಗಾರಿಕಾ ಇಲಾಖೆ ಸೋಮವಾರ ಆದೇಶ ಹೊರಡಿಸಿದೆ.

ತೋಟಗಾರಿಕಾ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಿಂದ ₹ 1.5 ಕೋಟಿ ಬಿಡುಗಡೆ ಮಾಡಿದ್ದು, ಅಡಿಕೆ ಕಾರ್ಯಪಡೆ ಖಾತೆಯಲ್ಲಿರುವ ₹ 2.5 ಕೋಟಿಯನ್ನೂ ಇದೇ ಉದ್ದೇಶಕ್ಕೆ ಬಳಸಿಕೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಪ್ರತಿ ಹೆಕ್ಟೇರ್‌ಗೆ ₹ 4,000ದಂತೆ ಒಬ್ಬ ರೈತನಿಗೆ ಗರಿಷ್ಠ ಒಂದೂವರೆ ಹೆಕ್ಟೇರ್‌ವರೆಗೆ ಔಷಧಿ ಖರೀದಿಗೆ ನೆರವು ನೀಡಲಾಗುತ್ತಿದೆ. ಸರಕು ಮತ್ತು ಸೇವಾ ತೆರಿಗೆ ಅಡಿ ನೋಂದಾಯಿತ ವ್ಯಾಪಾರಿಗಳು ಹಾಗೂ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಔಷಧಿ ಖರೀದಿಸಿರುವ ಬಿಲ್‌ಗಳ ಆಧಾರದಲ್ಲಿ ಸಹಾಯಧನವನ್ನು ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ವರ್ಗಾವಣೆ ಮಾಡಲಾಗುತ್ತದೆ. ಈ ರೋಗದಿಂದ ಅತಿಹೆಚ್ಚು ಬಾಧಿತವಾದ ಪ್ರದೇಶಗಳಲ್ಲಿ ಆದ್ಯತೆ ಮೇರೆಗೆ ಸಹಾಯಧನ ವಿತರಿಸಬೇಕು ಎಂದು ಇಲಾಖೆ ನಿರ್ದೇಶನ ನೀಡಿದೆ.

ADVERTISEMENT

ತೋಟಗಾರಿಕಾ ಸಚಿವ ಮುನಿರತ್ನ, ಅಡಿಕೆ ಕಾರ್ಯಪಡೆ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಆರಗ ಜ್ಞಾನೇಂದ್ರ, ಮೀನುಗಾರಿಕೆ ಮತ್ತು ಬಂದರು ಸಚಿವ ಎಸ್‌. ಅಂಗಾರ ನೇತೃತ್ವದಲ್ಲಿ ಸೆಪ್ಟೆಂಬರ್‌ 16ರಂದು ನಡೆದ ಸಭೆಯಲ್ಲಿ ಅಡಿಕೆ ಬೆಳೆಗಾರರಿಗೆ ಔಷಧಿ ಸಿಂಪಡಣೆಗೆ ಸಹಾಯಧನ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಒಟ್ಟು ₹ 8 ಕೋಟಿ ಅನುದಾನ ಬಿಡುಗಡೆಗೆ ಪ್ರಸ್ತಾವ ಸಲ್ಲಿಸಲಾಗಿತ್ತು. 10,000 ಹೆಕ್ಟೇರ್‌ ವಿಸ್ತೀರ್ಣದ ಅಡಿಕೆ ತೋಟಗಳಿಗೆ ಮೊದಲ ಹಂತದ ಔಷಧಿ ಸಿಂಪಡಣೆಗಾಗಿ ₹ 4 ಕೋಟಿ ಬಿಡುಗಡೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.