ಬೆಂಗಳೂರು: ‘ಭಾರತದ ಸುಪ್ರೀಂ ಕೋರ್ಟ್ ಲಾಂಛನದಲ್ಲಿನ ಯತೋ ಧರ್ಮಸ್ತತೋ ಜಯಃ (ಎಲ್ಲಿ ಧರ್ಮ ಇದೆಯೊ ಅಲ್ಲೇ ಜಯ ಸಾಧ್ಯ) ಎಂಬ ಸಂದೇಶವನ್ನು ಪಾಲಿಸಿದ ತೃಪ್ತಿ ಹೊಂದಿ ನಿವೃತ್ತಿಯಾಗುತ್ತಿದ್ದೇನೆ’ ಎಂದು ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಹೇಳಿದರು.
ಇದೇ 25ರಂದು ನಿವೃತ್ತಿ ಹೊಂದುತ್ತಿರುವ ಅವರಿಗೆ ಹೈಕೋರ್ಟ್ ಹಾಲ್ 1ರಲ್ಲಿ ಶುಕ್ರವಾರ ರಾಜ್ಯ ವಕೀಲರ ಪರಿಷತ್ ವತಿಯಿಂದ ಬೀಳ್ಕೊಡುಗೆ ಆಯೋಜಿಸಲಾಗಿತ್ತು. ಈ ವೇಳೆ ಮಾತನಾಡಿದ ಅವರು, ‘ಜನರಿಗೆ ಅರ್ಥವಾಗುವ ರೀತಿಯ ಸರಳ ಮತ್ತು ಓದುವ ಭಾಷೆಯಲ್ಲಿ ತೀರ್ಪು ಬರೆಯುವುದರಲ್ಲಿ ನಂಬಿಕೆ ಹೊಂದಿದ್ದೆ. ಅದರಂತ ನನ್ನ ಸೇವೆ ಸಲ್ಲಿಸಿದ್ದೇನೆ’ ಎಂದರು.
‘ನನ್ನ ವೃತ್ತಿ ಜೀವನದಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ದಿವಂಗತ ಸಾಲಿಸಿಟರ್ ಜನರಲ್ ಸೋಲಿ ಸೊರಾಬ್ಜಿ, ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಸೇರಿದಂತೆ ಹಲವು ಕಾನೂನು ಪಂಡಿತರು ನನಗೆ ಮಾರ್ಗದರ್ಶನ ಮಾಡಿದ್ದಾರೆ’ ಎಂದು ಸ್ಮರಿಸಿದರು.
‘ನ್ಯಾಯಾಂಗದ ಮೂಲಸೌಕರ್ಯ ಮತ್ತು ರಾಜ್ಯದಾದ್ಯಂತ ವ್ಯವಸ್ಥಿತ ಇ-ಕೋರ್ಟ್ ಯೋಜನೆ ಪ್ರಗತಿ ಸಾಧಿಸಲು ಎಲ್ಲರ ಜೊತೆಗೂಡಿ ಶ್ರಮಿಸಿದ್ದೇನೆ. ತಂತ್ರಜ್ಞಾನಕ್ಕೆ ತೆರೆದುಕೊಂಡಿರುವ ಈ ದಿನಗಳಲ್ಲಿ ನ್ಯಾಯದಾನ ವ್ಯವಸ್ಥೆ ಕ್ರಿಯಾತ್ಮಕವಾಗಿ ಸಾಕಷ್ಟು ಬದಲಾವಣೆ ಕಂಡಿದೆ. ನವೀನ ಮತ್ತು ಸಕಾರಾತ್ಮಕ ಕ್ರಮಗಳಿಂದ ಸಮಯದ ಉಳಿತಾಯ ಹಾಗೂ ದಾವೆದಾರರಿಗೆ ಶೀಘ್ರ ನ್ಯಾಯದಾನ ಸಾಧ್ಯವಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು. ಪರಿಷತ್ ಅಧ್ಯಕ್ಷ ವಿಶಾಲ ರಘು ಹಿರಿಯ ಮತ್ತು ಕಿರಿಯ ವಕೀಲರು ಇದ್ದರು.
ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿಗಳ ಮಂಜೂರಾತಿ ಸಂಖ್ಯೆ ಒಟ್ಟು 62. ಸದ್ಯ 51 ನ್ಯಾಯಮೂರ್ತಿಗಳಿದ್ದಾರೆ. ಕರ್ನಾಟಕದ ನೂತನ ಮುಖ್ಯ ನ್ಯಾಯಮೂರ್ತಿಯನ್ನಾಗಿ ಗುಜರಾತ್ ಹೈಕೋರ್ಟ್‌ನ ಎನ್.ವಿ.ಅಂಜಾರಿಯಾ ಅವರನ್ನು ನೇಮಕ ಮಾಡಲಾಗಿದ್ದು ಅವರು ಇದೇ 25ರಂದು ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.