ADVERTISEMENT

ರಾಜ್‌ ಪಾತ್ರದ ಪರಕಾಯ ಪ್ರವೇಶ ಮಾಡುತ್ತಿದ್ದ ಜಯಕುಮಾರ್‌ಗೆ ಸಂಕಷ್ಟ: ನೆರವಿಗೆ ಮನವಿ

ಹೃದಯ, ಮೂತ್ರಪಿಂಡ ಸಮಸ್ಯೆಯಿಂದ ಜಯಕುಮಾರ್ ಆಸ್ಪತ್ರೆಗೆ ದಾಖಲು

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2019, 20:13 IST
Last Updated 8 ಅಕ್ಟೋಬರ್ 2019, 20:13 IST
ತೀವ್ರ ನಿಗಾ ಘಟಕದಲ್ಲಿ ಜಯಕುಮಾರ್
ತೀವ್ರ ನಿಗಾ ಘಟಕದಲ್ಲಿ ಜಯಕುಮಾರ್   

ಬೆಂಗಳೂರು: ಹೃದಯ ಹಾಗೂ ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಹಿರಿಯ ಕಲಾವಿದ ಜಯಕುಮಾರ್ ನಗರದ ಮಣಿಪಾಲ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಅವರ ಕುಟುಂಬ ಚಿಕಿತ್ಸಾ ವೆಚ್ಚ ಭರಿಸಲಾಗದೆ ದಾನಿಗಳಿಂದ ಆರ್ಥಿಕ ನೆರವನ್ನು ಯಾಚಿಸಿದೆ.

50 ವರ್ಷಗಳಿಂದ ವೃತ್ತಿ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ದಾವಣಗೆರೆಯ ಕೊಡಗನೂರಿನ ಜಯಕುಮಾರ್‌ ಅವರು ಗುಬ್ಬಿ, ಗುಡಗೇರಿ, ಕುಮಾರಸ್ವಾಮಿ, ಚಿಂದೋಡಿ ಸೇರಿದಂತೆ 20ಕ್ಕೂ ಹೆಚ್ಚು ನಾಟಕ ಕಂಪನಿಗಳಲ್ಲಿ ರಂಗಸೇವೆ ಮಾಡಿದ್ದಾರೆ. 150ಕ್ಕೂ ಅಧಿಕ ಚಲನಚಿತ್ರಗಳಲ್ಲಿ ಹಾಗೂ ಕಿರುತೆರೆ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.

ಜಯಕುಮಾರ್ ಎರಡು ವಾರಗಳಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರ ಚಿಕಿತ್ಸೆಗೆ ಲಕ್ಷಾಂತರ ರೂಪಾಯಿ ವೆಚ್ಚವಾಗಲಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದು, ಕುಟುಂಬದ ಸದಸ್ಯರು ಕಂಗಾಲಾಗಿದ್ದಾರೆ. ‘ಕಳೆದ ತಿಂಗಳು ಕಲಬುರ್ಗಿಯಲ್ಲಿ ನಾಟಕವೊಂದರಲ್ಲಿ ಅಭಿನಯಿಸುತ್ತಿರುವಾಗ ಲಘು ಹೃದಯಾಘಾತಕ್ಕೆ ಒಳಗಾಗಿದ್ದರು. ಬಳಿಕ ದಾವಣಗೆರೆಯ ಖಾಸಗಿ ಆಸ್ಪತ್ರೆಯೊಂದಲ್ಲಿ ಆರೋಗ್ಯ ಪರೀಕ್ಷೆ ಮಾಡಿಸಿದಾಗ ಅವರು ಹೃದ್ರೋಗದ ಜತೆಗೆ ಮಧುಮೇಹ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವುದು ಬೆಳಕಿಗೆ ಬಂದಿತು. ಹೃದಯ ನಾಳಗಳಿಗೆ ಎರಡು ಸ್ಟಂಟ್ ಅಳವಡಿಸಲಾಗಿದೆ. ಇದೇ ವೇಳೆ ಮೂತ್ರಪಿಂಡ ಸಮಸ್ಯೆ ಸಹ ಕಾಣಿಸಿಕೊಂಡಿತು. ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್‌ ಆಸ್ಪತ್ರೆಗೆ ದಾಖಲಿಸುವಂತೆ ಅಲ್ಲಿನ ವೈದ್ಯರು ಶಿಫಾರಸು ಮಾಡಿದರು’ ಎಂದು ಪುತ್ರ ಮಾರುತಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ತಂದೆ ಗುಣಮುಖರಾಗುವುದಾಗಿ ವೈದ್ಯರು ಭರವಸೆ ನೀಡಿದ್ದಾರೆ. ಈಗಾಗಲೇ ₹ 70ಸಾವಿರಕ್ಕೂ ಅಧಿಕ ಹಣ ಖರ್ಚಾಗಿದ್ದು, ನಮ್ಮ ಕೈ ಖಾಲಿಯಾಗಿದೆ. ದಾನಿಗಳ ನೆರವಿನ ನಿರೀಕ್ಷೆಯಲ್ಲಿದ್ದೇವೆ. ಕಲಾವಿದರ ಜೀವನ ಇಷ್ಟೇನಾ ಎಂದು ಬೇಸರವಾಗುತ್ತಿದೆ’ ಎಂದು ಅಳಲು ತೋಡಿಕೊಂಡರು. ‘ಕಲಾವಿದರ ನೆರವಿಗೆ ಸರ್ಕಾರವಾದರೂ ಬರಬೇಕು. ಇನ್ನೊಬ್ಬರನ್ನು ರಂಜಿಸುವ ಕಲಾವಿದರಿಗೆ ಕಷ್ಟ ಬಂದಾಗ ಸಾಂತ್ವನ ಹೇಳಲು ಕೂಡ ಯಾರೂ ಬಾರದಿರುವುದು ನೋವನ್ನುಂಟು ಮಾಡಿದೆ’ ಎಂದರು.

ಸಂಪರ್ಕ: 99023 89044

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.