ADVERTISEMENT

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾಗಿ ಅಶೀಸರ ನೇಮಕ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2019, 11:42 IST
Last Updated 31 ಅಕ್ಟೋಬರ್ 2019, 11:42 IST
ಅನಂತ ಅಶೀಸರ
ಅನಂತ ಅಶೀಸರ   

ಶಿರಸಿ: ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರನ್ನಾಗಿ ತಾಲ್ಲೂಕಿನ ಅಶೀಸರದ ಅನಂತ ಹೆಗಡೆ ಅವರನ್ನು ರಾಜ್ಯ ಸರ್ಕಾರ ನೇಮಿಸಿ, ಆದೇಶ ಹೊರಡಿಸಿದೆ. ಅವರಿಗೆ ರಾಜ್ಯ ಸಚಿವ ದರ್ಜೆಯ ಸ್ಥಾನ ನೀಡಲಾಗಿದೆ. ಅನಂತ ಅಶೀಸರ ಅವರು ಈ ಹಿಂದೆ ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷರಾಗಿ, ಜೀವ ವೈವಿಧ್ಯ ಮಂಡಳಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

ಮೂರು ದಶಕಗಳಿಂದ ರಾಜ್ಯದ ವಿವಿಧ ಪರಿಸರ ಚಳವಳಿಗಳ ನೇತೃತ್ವವಹಿಸಿ ಅನುಭವ ಹೊಂದಿರುವ ಅಶೀಸರ ಅವರು, ಹಿಂದೆ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ (2008) ಪಶ್ಚಿಮಘಟ್ಟ ಕಾರ್ಯಪಡೆ ಅಧ್ಯಕ್ಷರಾಗಿ ಅನೇಕ ರಚನಾತ್ಮಕ ಕಾರ್ಯಗಳನ್ನು ಕೈಗೊಂಡಿದ್ದರು.

1983ರಿಂದ ಪಶ್ಚಿಮ ಘಟ್ಟದಲ್ಲಿ ಗ್ರಾಮೀಣ ವಿಕಾಸ ಕಾರ್ಯ ಹಾಗೂ ಪರಿಸರ ಚಳವಳಿಗಳಲ್ಲಿ ಸಂಪೂರ್ಣವಾಗಿ ತೊಡಗಿಕೊಂಡಿರುವ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರು ಬೇಡ್ತಿ, ಅಘನಾಶಿನಿ, ಕೈಗಾ, ಶರಾವತಿ ಭದ್ರಾ ಮೇಲ್ದಂಡೆಗಳಂತಹ ನದಿ ಕಣಿವೆಗಳ ಸಂರಕ್ಷಣೆಯ ಬೃಹತ್ ಆಂದೋಲನಗಳಿಂದ ಬಿಸಗೋಡ, ಅಂಬಾರಗುಡ್ಡಗಳಂಥ ಗಣಿ ವಿರೋಧಿ ಹೋರಾಟಗಳವರೆಗೆ ಪಶ್ಚಿಮಘಟ್ಟದ ಧ್ವನಿಯಾಗಿ ಗುರುತಿಸಿಕೊಂಡವರು.

ADVERTISEMENT

ಪಶ್ಚಿಮಘಟ್ಟ ಉಳಿಸಿ ಪಾದಯಾತ್ರೆ, ಬೇಡ್ತಿ ಪಾದಯಾತ್ರೆ, ವೃಕ್ಷಾರೋಪಣ ಅಭಿಯಾನ, ಹಸಿರು ಆರೋಗ್ಯ ಶಿಬಿರಗಳು ಸೇರಿದಂತೆ ಹಲವು ರಚನಾತ್ಮಕ ಪರಿಸರ ಜಾಗೃತಿ ಕಾರ್ಯಗಳಲ್ಲಿ 35 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದವರು. ಸೇವಾ ಸಾಗರ ಸಂಸ್ಥೆ, ಆರೋಗ್ಯ ವಿಕಾಸ ಪ್ರಕಲ್ಪ, ಅಜಿತಮನೋಚೇತನಾ, ಸಸ್ಯಲೋಕ ಸ್ವರ್ಣವಲ್ಲಿ, ಗ್ರಾಮ ಅರಣ್ಯ ಸಮಿತಿ ಹೀಗೆ ಹಲವು ಸಂಘಟನೆ, ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡವರು.

2008ರಲ್ಲಿ ರಾಜ್ಯ ಸರ್ಕಾರ ರಚಿಸಿದ್ದ ಪಶ್ಚಿಮಘಟ್ಟ ಕಾರ್ಯಪಡೆಯ ಅಧ್ಯಕ್ಷರಾಗಿ ನಾಲ್ಕು ವರ್ಷಗಳ ಕಾಲ, ನವೀನ ಅರಣ್ಯ ಅಭಿವೃದ್ಧಿ ಯೋಜನೆಗಳನ್ನು ಜಾರಿಮಾಡಲು ಪ್ರಯತ್ನಿಸಿ, ಯಶಸ್ವಿಯಾಗಿದ್ದಾರೆ. ದೇವರಕಾಡು, ಕರಾವಳಿ ಹಸಿರು ಕವಚ ಯೋಜನೆ, ಬೇಡ್ತಿ, ಅಘನಾಶಿನಿ, ಶಾಲ್ಮಲಾ, ಸಂರಕ್ಷಿತ ಪ್ರದೇಶ ಘೋಷಣೆ ಮುಂತದ ಪಶ್ಚಿಮ ಘಟ್ಟ ಸಂರಕ್ಷಣಾ ಯೋಜನೆಗಳ ಜಾರಿಯಲ್ಲಿ ಅಶೀಸರ ಪಾತ್ರ ಪ್ರಮುಖವಾದದ್ದು.

2009ರಿಂದ 2013ರವರೆಗೆ ಜೀವವ್ಯವಿಧ್ಯ ಮಂಡಳಿ ಉಪಾಧ್ಯಕ್ಷರಾಗಿದ್ದವರು. 1999ರಿಂದ ಇಲ್ಲಿಯವರೆಗೆ ನಿರಂತರವಾಗಿ ಜೀವ ವೈವಿಧ್ಯ ಗ್ರಾಮ ದಾಖಲಾತಿ ಶಿಬಿರಗಳನ್ನು ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ನಡೆಸಿಕೊಂಡು ಬಂದಿದ್ದಾರೆ. 2000ನೇ ಇಸವಿಯಲ್ಲಿ ಜೀವ ವೈವಿಧ್ಯ ಕರಡು ಮಸೂದೆ ಬಗ್ಗೆ ತಳಮಟ್ಟದಲ್ಲಿ ಅಭಿಪ್ರಾಯ ಕ್ರೋಡೀಕರಿಸುವಲ್ಲಿ ವಿಶೇಷ ಪ್ರಯತ್ನ ನಡೆಸಿದ ಅಶೀಸರ ಅವರು ಈ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದವರು.

ಮಲೆನಾಡಿನಾದ್ಯಂತ ಹಬ್ಬಿರುವ ವಿಸ್ತಾರವಾದ ಕಾನು ಅರಣ್ಯವನ್ನು ಸಂರಕ್ಷಿಸಲು ಕಳೆದೊಂದು ದಶಕದಿಂದ ವಿಶೇಷವಾಗಿ ಪ್ರಯತ್ನಿಸುತ್ತಿದ್ದಾರೆ. ರಾಜ್ಯದ ಹಲವು ಪರಿಸರ ಸಂಘಟನೆಗಳು, ಪರಿಸರ ತಜ್ಞರು, ಕಾರ್ಯಕರ್ತರು, ಜೀವ ವೈವಿಧ್ಯ ಮಂಡಳಿಯ ನೂತನ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರನ್ನು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.