ಆರ್.ಅಶೋಕ
ಬೆಂಗಳೂರು: ಮಸೀದಿಗಳಲ್ಲಿ ಕನ್ನಡದಲ್ಲೇ ಆಜಾನ್ ಕೂಗುವಂತೆ ಫರ್ಮಾನು ಹೊರಡಿಸಲು ನಿಮ್ಮಿಂದ ಸಾಧ್ಯವೇ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಸಚಿವ ರಾಮಲಿಂಗಾ ರೆಡ್ಡಿ ಅವರನ್ನು ಪ್ರಶ್ನಿಸಿದ್ದಾರೆ.
ಮುಜರಾಯಿ ದೇವಾಲಯಗಳಲ್ಲಿ ಪೂಜೆ ಸಂದರ್ಭದಲ್ಲಿ ಕನ್ನಡದಲ್ಲೇ ಶ್ಲೋಕ ಹೇಳಬೇಕು. ಅದಕ್ಕಾಗಿ, ಕನ್ನಡ ಶ್ಲೋಕಗಳನ್ನು ಕಲಿಯಲು ಸೂಚನೆ ನೀಡಲಾಗುವುದು ಎಂದು ಸಾರಿಗೆ ಸಚಿವ ರೆಡ್ಡಿ ಅವರು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಅಶೋಕ ವಾಗ್ದಾಳಿ ನಡೆಸಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್/ಟ್ವಿಟರ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಅಶೋಕ, 'ಮಸೀದಿಗಳಲ್ಲೂ ಕನ್ನಡದಲ್ಲೇ ನಮಾಜ್ ಮಾಡಬೇಕು, ಕನ್ನಡದಲ್ಲೇ ಆಜಾನ್ ಕೂಗಬೇಕು ಎಂದು ಫರ್ಮಾನು ಹೊರಡಿಸಿ ಸಚಿವ ರಾಮಲಿಂಗಾರೆಡ್ಡಿ ಅವರೇ. ಆಗುತ್ತಾ? ಓಲೈಕೆ, ತುಷ್ಟೀಕರಣಕ್ಕೂ ಒಂದು ಇತಿಮಿತಿ ಬೇಡವೇ? ಹಿಂದೂಗಳು ಸಹನಶೀಲರು, ಸಹಿಷ್ಣುಗಳು ಎಂದ ಮಾತ್ರಕ್ಕೆ ಈ ಮಟ್ಟಕ್ಕೆ ಇಳಿದು ತಾಳ್ಮೆ ಪರೀಕ್ಷೆ ಮಾಡಬೇಡಿ. ವೋಟಿಗೋಸ್ಕರ ನಮ್ಮ ದೇಶ, ಧರ್ಮ, ಸಂಸ್ಕೃತಿ ಆತ್ಮಸಾಕ್ಷಿ ಏನನ್ನಾದರೂ ಮಾರಿಕೊಳ್ಳುವ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ನಾಚಿಕೆಯಾಗಬೇಕು' ಎಂದು ಗುಡುಗಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಕಲಾಪದ ಸಂದರ್ಭದಲ್ಲಿ ಮುಜರಾಯಿ ದೇವಾಲಯಗಳಲ್ಲಿ ಸಂಸ್ಕೃತದಲ್ಲಿ ಶ್ಲೋಕ ಹೇಳುವ ಕುರಿತು ಚರ್ಚೆಯಾಗಿದೆ. ಈ ವೇಳೆ ರೆಡ್ಡಿ ಅವರು ಕನ್ನಡದಲ್ಲಿ ಶ್ಲೋಕ ಹೇಳುವಂತೆ ಮಾಡುವ ಕುರಿತು ಮಾತನಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.